ದುಬೈ: ಏಷ್ಯಾ ಕಪ್ ಫೈನಲ್ ಪಂದ್ಯ ರೋಚಕವಾಗಿ ಮುಕ್ತಾಯಗೊಂಡ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾರೀ ಹೈಡ್ರಾಮಾ ನಡೆದಿದೆ.
ಒಂದೆಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಹಾಗೂ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಭಾರತೀಯ ತಂಡ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರು, ಕೋಪದಲ್ಲಿ ರನ್ನರ್ ಅಪ್ ಚೆಕ್ ಬಿಸಾಡಿ ದುರ್ವರ್ತನೆ ತೋರಿದ್ದಾರೆ.
ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪ್ರತಿನಿಧಿ ಅಮೀನುಲ್ ಇಸ್ಲಾಂ ಅವರಿಂದ ರನ್ನರ್ ಅಪ್ ಚೆಕ್ ಪಡೆದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಹತಾಶೆಯಿಂದ ಅದನ್ನು ವೇದಿಕೆಯಲ್ಲೇ ಎಸೆದು ಹೋಗಿದ್ದಾರೆ.
ಪಾಕಿಸ್ತಾನ ತಂಡದ ನಾಯಕರ ಈ ವರ್ತನೆಗೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನ ನಾಯಕರ ವರ್ತನೆ ವಿರುದ್ಧ ಭಾರೀ ಟೀಕೆಗಳೂ ವ್ಯಕ್ತವಾಗುತ್ತಿವೆ.