ಲಖನೌ: ಲಖನೌದಲ್ಲಿ ಭಾನುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ವಿವಾದಕ್ಕೆ ಕಾರಣವಾಯಿತು. ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕೆ ಅಂಗ್‌ಕ್ರಿಶ್ ರಘುವಂಶಿಯನ್ನು ಔಟ್ ಮಾಡಲಾಯಿತು.ಪಂದ್ಯದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆಯಿತು.
ಪ್ರಿನ್ಸ್ ಯಾದವ್ ಎಸೆದ ಎಸೆತವನ್ನು ರಘುವಂಶಿ ಬಾರಿಸಿ ರನ್ ಕದಿಯಲು ಮುಂದಾದರು. ಆದರೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಕ್ಯಾಮೆರಾನ್ ಗ್ರೀನ್ ರನ್ ಓಡಲು ನಿರಾಕರಿಸಿದರು. ತಕ್ಷಣ ಅಂಗ್ ಕ್ರಿಶ್ ರಘುವಂಶಿ ಮತ್ತೆ ಸ್ಟ್ರೈಕರ್ ಎಂಡ್‌ಗೆ ಮರಳಲು ಯತ್ನಿಸಿದರು.
ಈ ವೇಳೆ ಮೊಹಮ್ಮದ್ ಶಮಿ ಎಸೆದ ಚೆಂಡು ರಘುವಂಶಿ ಅವರ ಪ್ಯಾಡ್‌ಗೆ ತಗುಲಿತು. ಲಖನೌ ತಂಡ ಔಟ್‌ಗಾಗಿ ಮನವಿ ಮಾಡಿದಾಗ, ಟಿವಿ ಅಂಪೈರ್ ಇದನ್ನು ಪರಿಶೀಲಿಸಿ 'ಬ್ಯಾಟರ್ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಾರೆ' ಎಂದು ಔಟ್ ನೀಡಿದರು. ಇದೇ ವಿವಾದಕ್ಕೆ ಕಾರವಾಗಿದೆ.
ಬಳಿಕ ಅಸಮಾಧಾನಗೊಂಡು ಕ್ರೀಸ್ ನಿಂದ ಹೊರಬಂದ ಅಂಗ್ ಕ್ರಿಶ್ , ಬೌಂಡರಿ ಲೈನ್ ನಲ್ಲಿ ಕುಶನ್ ನನ್ನು ಬ್ಯಾಟ್ ನಿಂದ ಬಡಿದರು. ಕೆಕೆಆರ್ ಕೋಚ್‌ಗಳಾದ ಶೇನ್ ವಾಟ್ಸನ್ ಮತ್ತು ಅಭಿಷೇಕ್ ನಾಯರ್ ಈ ತೀರ್ಪಿನ ಬಗ್ಗೆ ಬೌಂಡರಿ ಲೈನ್‌ನಲ್ಲಿ ಪಂದ್ಯದ ಅಧಿಕಾರಿಗಳ ಜೊತೆ ಸುದೀರ್ಘ ವಾದಕ್ಕಿಳಿದ ದೃಶ್ಯಗಳು ಕಂಡುಬಂದವು.