ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ಆಯ್ಕೆ Online Desk
ಕ್ರಿಕೆಟ್

ಅಪ್ಪನ ಹಾದಿಯಲ್ಲೇ ಮಕ್ಕಳು.. ಮತ್ತೆ ಒಂದಾದ ಸೆಹ್ವಾಗ್ ಮತ್ತು ದ್ರಾವಿಡ್ ಜೋಡಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ಆಯ್ಕೆ

ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಬಿಸಿಸಿಐ ಪ್ರಕಟಿಸಿರುವ U-19 ಏಕದಿನ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಇಬ್ಬರೂ ಒಟ್ಟಿಗೆ ಸ್ಥಾನ ಪಡೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಮತ್ತು ವಿಭಿನ್ನ ಶೈಲಿಯ ಬ್ಯಾಟಿಂಗ್ ಜೋಡಿ ಅಂದರೆ ಅದು ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್; ಹೌದು, ಸೆಹ್ವಾಗ್ ತಮ್ಮ ಆಕ್ರಮಣಕಾರಿ, ಸ್ಫೋಟಕ ಆಟಕ್ಕೆ ಹೆಸರಾಗಿದ್ದರೆ, ದ್ರಾವಿಡ್ ತಮ್ಮ ತಾಳ್ಮೆಯ ಆಟದಿಂದಲೇ ದಿ ವಾಲ್ ಎಂದೇ ಪ್ರಸಿದ್ಧರಾಗಿದ್ದರು. ಈ ಇಬ್ಬರ ಆಟದ ಶೈಲಿ ತದ್ವಿರುದ್ಧವಾಗಿದ್ದರೂ, ಮೈದಾನದಲ್ಲಿ ಇವರಿಬ್ಬರ ಜೊತೆಯಾಟ ಭಾರತಕ್ಕೆ ಹಲವು ಸ್ಮರಣೀಯ ಜಯಗಳನ್ನು ತಂದುಕೊಟ್ಟಿದೆ. ಅದರಲ್ಲೂ, ಸೆಹ್ವಾಗ್ ಮತ್ತು ದ್ರಾವಿಡ್ ಜೋಡಿ, 2006ರ ಪಾಕಿಸ್ತಾನ ವಿರುದ್ಧದ ಲಾಹೋರ್ ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಬರೋಬ್ಬರಿ 410 ರನ್‌ಗಳ ಬೃಹತ್ ಜೊತೆಯಾಟವಾಡಿದರು. ಅದನ್ನ ಇಂದಿಗೂ ಅದೆಷ್ಟೋ ಕ್ರಿಕೆಟ್ ಪ್ರಿಯರು ಮರೆತಿಲ್ಲ! ಆದರೆ, ಈ ಇಬ್ಬರು ದೈತ್ಯ ಕ್ರಿಕೆಟಿಗರ ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ ಹಿಡಿದು ವರ್ಷಗಳೇ ಉರುಳಿವೆ! ಆದರೆ, ಈಗ ಅದೇ ಇತಿಹಾಸ ಮರುಕಳಿಸುವ ಸಮಯ ಬಂದಿದೆ. ಆದರೆ ಈ ಬಾರಿ ಮೈದಾನಕ್ಕಿಳಿಯುತ್ತಿರುವುದು ತಂದೆಯಂದಿರಲ್ಲ, ಅವರ ಹೆಮ್ಮೆಯ ಪುತ್ರರು.

ಹೌದು, ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಬಿಸಿಸಿಐ ಇಂದು ಪ್ರಕಟಿಸಿರುವ ಭಾರತದ ಅಂಡರ್-19 ಏಕದಿನ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಇಬ್ಬರೂ ಒಟ್ಟಿಗೆ ಸ್ಥಾನ ಪಡೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮೊದಲ ಬಾರಿಗೆ ಆರ್ಯವೀರ್ ಆಯ್ಕೆ, ಸ್ಥಾನ ಉಳಿಸಿಕೊಂಡ ಅನ್ವಯ್

ಪ್ರಸ್ತುತ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ, 18 ವರ್ಷದ ಆರ್ಯವೀರ್ ಸೆಹ್ವಾಗ್ ಅವರಿಗೆ ಇದು ಚೊಚ್ಚಲ ಭಾರತ ತಂಡದ ಕರೆಯಾಗಿದೆ. ಮತ್ತೊಂದೆಡೆ, 17 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಅನ್ವಯ್ ದ್ರಾವಿಡ್ ಅವರು ಕಳೆದ ತಿಂಗಳು ಶ್ರೀಲಂಕಾ ಪ್ರವಾಸದಲ್ಲೂ ಭಾರತ ಯು-19 ತಂಡದ ಭಾಗವಾಗಿದ್ದರು. ಅದರಂತೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಆಗುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಏತನ್ಮಧ್ಯೆ, ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಕೂಡ ಈ ಹಿಂದೆ ಯು-19 ತಂಡದಲ್ಲಿ ಆಡಿದ್ದಾರೆ ಎಂಬುದು ಗಮನಾರ್ಹ.

14 ವರ್ಷಗಳ ನಂತರ ಪುನರಾವರ್ತನೆ

2012ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಕೊನೆಯ ಬಾರಿಗೆ ಒಟ್ಟಿಗೆ ಆಡಿದ್ದರು. ಈಗ 14 ವರ್ಷಗಳ ನಂತರ ಅವರ ಪುತ್ರರು ಅದೇ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಒಟ್ಟಿಗೆ ಕಣಕ್ಕಿಳಿಯುತ್ತಿದ್ದಾರೆ.

ಮುಂದುವರೆದು, ಸೆಪ್ಟೆಂಬರ್ 18 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ಅಂಡರ್-19 ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಬಹುದಿನಗಳ ಪಂದ್ಯಗಳು ನಡೆಯಲಿವೆ. ಆದರೆ, ಸೆಹ್ವಾಗ್ ಮತ್ತು ದ್ರಾವಿಡ್ ಪುತ್ರರು ಕೇವಲ ಏಕದಿನ ಸರಣಿಯ ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ. ಅದರಂತೆ, ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಸರಣಿಗಾಗಿ ಬಿಸಿಸಿಐ ಪ್ರಕಟಿಸಿರುವ ಭಾರತದ ಅಂಡರ್-19 ತಂಡದ ವಿವರ ಇಲ್ಲಿದೆ.

ಏಕದಿನ ಪಂದ್ಯಗಳ ತಂಡ:

ಲಕ್ಷ್ಮಣ್ ರೈಚಂದಾನಿ (ನಾಯಕ), ಯಶ್‌ವರ್ಧನ್ ಚೌಹಾಣ್ (ಉಪನಾಯಕ), ರಜತ್ ಬಘೇಲ್ (ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ವಿ. ಯಶ್‌ವೀರ್, ರೋಹಿತ್ ಯಾದವ್, ಶಾವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪಾಟಿ ವೆಂಕಟ, ಕಾವ್ಯ ಪಟೇಲ್.

ಬಹುದಿನಗಳ ಪಂದ್ಯಗಳ ತಂಡ:

ಯಶ್‌ವರ್ಧನ್ ಚೌಹಾಣ್ (ನಾಯಕ), ಲಕ್ಷ್ಮಣ್ ರೈಚಂದಾನಿ (ಉಪನಾಯಕ), ಮಾನವ್ ಕೃಷ್ಣ (ವಿಕೆಟ್ ಕೀಪರ್), ಅಭಿಪ್ರಾಯ್ ಬಿಸ್ವಾಸ್ (ವಿಕೆಟ್ ಕೀಪರ್), ಸಾಗರ್ ವೀರ್ಕ್, ಕುಶಾಗ್ರ ಓಜಾ, ಮನಲ್ ಚೌಹಾಣ್, ಕುಶ್ ಪಟೇಲ್, ರೋಹಿತ್ ಯಾದವ್, ಇಶಾನ್ ಓಮ್, ಅಯಾನ್ ಅಕ್ರಮ್, ಪ್ರಣವ್ ರಾಘವೇಂದ್ರ, ಪ್ರಿಯಾಂಶು ಸಿಂಗ್, ಮೋಹಿತ್ ಉಲ್ವಾ, ಆರ್ಯನ್ ಯಾದವ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!