ಭಾರತ-ಶ್ರೀಲಂಕಾ ಪಂದ್ಯ ಡ್ರಾದಲ್ಲಿ ಅಂತ್ಯ 
ಕ್ರಿಕೆಟ್

ಭಾರತ-ಶ್ರೀಲಂಕಾ 2ನೇ ಟೆಸ್ಟ್ ಡ್ರಾದಲ್ಲಿ ಅಂತ್ಯ; WTC ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಂ ಇಂಡಿಯಾಗೆ ಭಾರೀ ಹೊಡೆತ!

4ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ನಿನ್ನೆ 7 ರನ್ ಗಳಿಸಿದ್ದ ಸೋನಲ್ ದಿನುಶಾ ಮತ್ತು 3 ರನ್ ಗಳಿಸಿದ್ದ ಕೆಶಾರಾ ನುವಾಂತ ಅಂತಿಮ ದಿನದಾಟ ಮುಂದುವರೆಸಿದರು...

ಕೊಲಂಬೋ: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಗೆಲುವಿನ ಉತ್ತಮ ಅವಕಾಶ ಹೊಂದಿದ್ದ ಭಾರತಕ್ಕೆ ಕೊನೆಗೂ ನಿರಾಸೆಯಾಗಿದ್ದು, ಲಂಕಾದ ಬಾಲಂಗೋಚಿ ಬ್ಯಾಟರ್ ಗಳ ಆರ್ಭಟದಿಂದಾಗಿ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಗೊಂಡಿದೆ.

ಹೌದು.. 4ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ನಿನ್ನೆ 7 ರನ್ ಗಳಿಸಿದ್ದ ಸೋನಲ್ ದಿನುಶಾ ಮತ್ತು 3 ರನ್ ಗಳಿಸಿದ್ದ ಕೆಶಾರಾ ನುವಾಂತ ಅಂತಿಮ ದಿನದಾಟ ಮುಂದುವರೆಸಿದರು. ಗುರುವಾರ ಐದನೇ ದಿನದಾಟ ಆರಂಭಿಸಿದಾಗ ಭಾರತ ಗೆಲುವಿನ ಭರವಸೆಯಲ್ಲಿತ್ತು.

ನಾಲ್ಕನೇ ದಿನದ ಅಂತ್ಯಕ್ಕೆ ಫಾಲೋಆನ್ ಪಡೆದಿದ್ದ ಶ್ರೀಲಂಕಾ 229/6 ರನ್ ಗಳಿಸಿ ಕೇವಲ 16 ರನ್‌ಗಳ ಮುನ್ನಡೆಯಲ್ಲಿತ್ತು. ಹೀಗಾಗಿ ಭಾರತದ ಬೌಲರ್‌ಗಳು ಉಳಿದ ನಾಲ್ಕು ವಿಕೆಟ್‌ಗಳನ್ನು ಶೀಘ್ರವಾಗಿ ಕಬಳಿಸಿ ಪಂದ್ಯ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು.

ಆದರೆ ಲಂಕಾದ ಬಾಲಂಗೋಚಿ ಬ್ಯಾಟರ್ ಸೋನಲ್ ದಿನುಷಾ ಭಾರತದ ಗೆಲುವಿನ ಹಾದಿಗೆ ದೊಡ್ಡ ಅಡ್ಡಿಯಾದರು. ಅಂತಿಮ ದಿನ ರಕ್ಷಣಾತ್ಮಕ ಆಟವಾಡಿದ ದಿನುಷಾ 264 ಎಸೆತಗಳನ್ನು ಎದುರಿಸಿ 8 ಬೌಂಡರಿ, 2 ಸಿಕ್ಸರ್ ಗಳ ಸಹಿತ ಅಜೇಯ 133 ರನ್ ಕಲೆಹಾಕಿದರು.

ಅವರ ಹೋರಾಟದ ನೆರವಿನಿಂದ ಶ್ರೀಲಂಕಾ ಎರಡನೇ ಇನಿಂಗ್ಸ್‌ನಲ್ಲಿ 429/9 ರನ್ ಗಳಿಸಿತು. ದಿನುಷಾ ಅವರಿಗೆ ನುವಾಂತ ಉತ್ತಮ ಸಾಥ್ ನೀಡಿದರು. ನುವಾಂತ ಕೂಡ 150 ಎಸೆತಗಳನ್ನು ಎದುರಿಸಿ 46 ರನ್ ಗಳಿಸಿ ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು. ಏಳನೇ ವಿಕೆಟ್‌ಗೆ ಇವರಿಬ್ಬರು 112 ರನ್‌ಗಳ ಜೊತೆಯಾಟ ನೀಡಿದರು. ಈ ಜೊತೆಯಾಟ 174 ನಿಮಿಷ ಹಾಗೂ 246 ಎಸೆತಗಳ ಕಾಲ ಮುಂದುವರಿಯಿತು.

ಸೋನಲ್ ದಿನುಷಾ ಅವರ ಅಜೇಯ ಶತಕದ ಹೋರಾಟದ ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಕೊನೆಗೆ ಎರಡೂ ತಂಡಗಳು ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲು ಒಪ್ಪಿಕೊಂಡವು. ಫಾಲೋಆನ್ ಹೇರಿಯೂ ಭಾರತ ಗೆಲ್ಲಬಹುದಾಗಿದ್ದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

WTC ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಂ ಇಂಡಿಯಾಗೆ ಭಾರೀ ಹೊಡೆತ!

ಇನ್ನು 2ನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿರುವುದು WTC ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಂ ಇಂಡಿಯಾಗೆ ಭಾರೀ ಹೊಡೆತ ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (WTC) ಪಾಯಿಂಟ್ಸ್‌ ಟೇಬಲ್‌ನಲ್ಲಿ ಭಾರತ 5ನೇ ಸ್ಥಾನದಲ್ಲೇ ಉಳಿದಿದೆ.

11 ಟೆಸ್ಟ್‌ಗಳಲ್ಲಿ ಭಾರತ ಇದೀಗ 5 ಗೆಲುವು, 2 ಡ್ರಾ ಸಾಧಿಸಿದ್ದು, 51.52% ಗೆಲುವಿನ ಶೇಕಡಾವಾರು ಹೊಂದಿದೆ. ಪಂದ್ಯಕ್ಕೂ ಮುನ್ನ ಭಾರತದ ಗೆಲುವಿನ ಶೇಕಡಾವಾರು 53.33% ಇತ್ತು. ಡ್ರಾದ ಬಳಿಕ ಅದು 51.52%ಕ್ಕೆ ಇಳಿದಿದೆ.

ಭಾರತದ ಹಾದಿ ಕಠಿಣ

ಶ್ರೀಲಂಕಾ ಸರಣಿ ಮುಗಿದ ಬಳಿಕ ಭಾರತಕ್ಕೆ WTC ಚಕ್ರದಲ್ಲಿ ಇನ್ನೂ 7 ಟೆಸ್ಟ್‌ಗಳು ಬಾಕಿ ಇವೆ. ನ್ಯೂಜಿಲೆಂಡ್ ವಿರುದ್ಧ 2 ಹಾಗೂ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್‌ಗಳನ್ನು ಭಾರತ ಆಡಲಿದೆ. WTC ಫೈನಲ್‌ ರೇಸ್‌ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಬೇಕಾದರೆ ಈ ಏಳು ಪಂದ್ಯಗಳಲ್ಲಿ ಕನಿಷ್ಠ ಐದು ಪಂದ್ಯಗಳನ್ನು ಗೆಲ್ಲಬೇಕಾದ ಅಗತ್ಯವಿದೆ. ಜೊತೆಗೆ ಇತರ ತಂಡಗಳ ಫಲಿತಾಂಶಗಳೂ ಭಾರತದ ಪರವಾಗಿ ಬರಬೇಕಾಗುತ್ತದೆ.

ಭಾರತಕ್ಕೆ ಮತ್ತೆ ತಲೆನೋವಾದ ಕೆಳಕ್ರಮಾಂಕದ ಬ್ಯಾಟರ್‌ಗಳು

ಶ್ರೀಲಂಕಾದ ಕೆಳಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಭಾರತ ಮತ್ತೊಮ್ಮೆ ಪರದಾಡಿತು. ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 290 ರನ್‌ಗಳಿಗೆ ಆಲೌಟ್‌ ಆಗಿದ್ದರೂ, ಕೊನೆಯ ಮೂರು ವಿಕೆಟ್‌ಗಳು 45 ಓವರ್‌ಗಳನ್ನು ಎದುರಿಸಿ 117 ರನ್‌ಗಳನ್ನು ಸೇರಿಸಿದ್ದವು.

ಎರಡನೇ ಇನಿಂಗ್ಸ್‌ನಲ್ಲೂ ದಿನುಷಾ ಇದೇ ರೀತಿಯ ಪ್ರತಿರೋಧ ತೋರಿದರು. ಈ ಸರಣಿಯಲ್ಲಿ ದಿನುಷಾ ಸತತವಾಗಿ ನಾಲ್ಕು ಇನಿಂಗ್ಸ್‌ಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹೀಗಾಗಿ ಭಾರತದ ಬೌಲರ್‌ಗಳಿಗೆ ಈ ಸರಣಿಯಲ್ಲಿ ದಿನುಷಾ ದೊಡ್ಡ ತಲೆನೋವಾಗಿ ಪರಿಣಮಿಸಿದರು.

ಗೆಲುವು ಬಹುತೇಕ ಖಚಿತ ಎನ್ನಲಾಗಿದ್ದ ಪಂದ್ಯವನ್ನು ಡ್ರಾಗೆ ತಳ್ಳಿದ ದಿನುಷಾ ಹೋರಾಟ, WTC ಫೈನಲ್‌ ಗುರಿ ಹೊಂದಿರುವ ಟೀಂ ಇಂಡಿಯಾಗೆ ಎಚ್ಚರಿಕೆಯ ಗಂಟೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; 'ಅನಿವಾರ್ಯ ಕಾರಣ' ಎಂದ ವಿವಿ