2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ಆಡಲು ನಿರಾಕರಿಸಿದೆ. ಏಕೆಂದರೆ ಆ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಹೇಳಿದ್ದಾರೆ. ಬುಧವಾರ, ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಿರುವುದನ್ನು 'ಸೂಕ್ತ ನಿರ್ಧಾರ' ಎಂದು ಕರೆದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಬಾಂಗ್ಲಾದೇಶವನ್ನು ಬೆಂಬಲಿಸುವುದು ಇದರ ಹಿಂದಿದೆ ಎಂದಿದ್ದಾರೆ. '20 ವಿಶ್ವಕಪ್‌ನಲ್ಲಿ ನಾವು ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ. ಏಕೆಂದರೆ, ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇರಬಾರದು' ಎಂದು ಸಭೆಯ ನಂತರ ಷರೀಫ್ ಹೇಳಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, 1983ರ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾದ ಆಜಾದ್, 2026ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಬಹಿಷ್ಕರಿಸುವ ಮೂಲಕ ಪಾಕಿಸ್ತಾನವು ತನಗಾಗುವ ಅವಮಾನದಿಂದ ದೂರಸರಿಯುತ್ತಿದೆ ಎಂದು ಹೇಳಿದರು.
'ಭಾರತದ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎಂಬುದು ಶೆಹಬಾಜ್ ಷರೀಫ್ ಅವರಿಗೆ ಮತ್ತು ಇಡೀ ಪಾಕಿಸ್ತಾನಕ್ಕೆ ತಿಳಿದಿದೆ. ಈ ಮುಜುಗರದಿಂದ ತಪ್ಪಿಸಿಕೊಳ್ಳಳು ಅದು ಪಂದ್ಯವನ್ನು ಬಹಿಷ್ಕರಿಸಿತು. ಎರಡೂ ದೇಶಗಳು ಐಸಿಸಿ ಸದಸ್ಯರಾಗಿರುವುದರಿಂದ, ಒಂದು ತಂಡ ಆಡುವ ಮತ್ತು ಇನ್ನೊಂದು ತಂಡ ನಿರಾಕರಿಸುವ ಬದಲು ಪಂದ್ಯವನ್ನೇ ರದ್ದುಗೊಳಿಸಬಹುದು. 2025ರ ಏಷ್ಯಾ ಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಆಡಬಾರದಿತ್ತು' ಎಂದು ಕೀರ್ತಿ ಆಜಾದ್ ANI ಗೆ ತಿಳಿಸಿದರು.
ಫೆಬ್ರುವರಿ 15 ರಂದು ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ತನ್ನ ಗುಂಪು ಹಂತದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲು ನಿರ್ಧರಿಸಿದ ನಂತರ ಆಜಾದ್ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸರ್ಕಾರವು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 'ಮೈದಾನಕ್ಕೆ ಇಳಿಯುವುದಿಲ್ಲ' ಎಂದು ಹೇಳಿದೆ.
ವಿಶ್ವಕಪ್‌ಗೆ ಮುಂಚಿತವಾಗಿ ಭಾರತ ತಂಡವು ಅದ್ಭುತ ಫಾರ್ಮ್‌ನಲ್ಲಿದೆ ಮತ್ತು ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ T20I ಸರಣಿಯನ್ನು 4-1 ಅಂತರದಿಂದ ಗೆದ್ದಿದೆ.
ಪಾಕಿಸ್ತಾನವು ಭಾರತದ ವಿರುದ್ಧದ ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದ ಕೆಲವೇ ಗಂಟೆಗಳ ನಂತರ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), 'ಆಯ್ದ ಭಾಗವಹಿಸುವಿಕೆ' 'ಜಾಗತಿಕ ಕ್ರೀಡಾಕೂಟದ ಮೂಲಭೂತ ನಿಯಮ'ಕ್ಕೆ ಹೊಂದಿಕೆಯಾಗುವುದಿಲ್ಲ. ಎಲ್ಲ ಪಾಲುದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಪರಸ್ಪರ ಸ್ವೀಕಾರಾರ್ಹ ನಿರ್ಣಯವನ್ನು ಅನ್ವೇಷಿಸುತ್ತದೆ ಎಂದು ಪಿಸಿಬಿಯಿಂದ ನಿರೀಕ್ಷಿಸಲಾಗುತ್ತದೆ ಎಂದು ಹೇಳಿದೆ.
'ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (ಪಿಸಿಬಿ) ಅಧಿಕೃತ ಸಂವಹನಕ್ಕಾಗಿ ಕಾಯುತ್ತಿದ್ದರೂ, ಆಯ್ದ ಭಾಗವಹಿಸುವಿಕೆಯ ಈ ನಿಲುವು ಜಾಗತಿಕ ಕ್ರೀಡಾಕೂಟದ ಮೂಲಭೂತ ಪ್ರಮೇಯದೊಂದಿಗೆ ಹೊಂದಾಣಿಕೆ ಮಾಡುವುದು ಕಷ್ಟ, ಅಲ್ಲಿ ಎಲ್ಲ ಅರ್ಹ ತಂಡಗಳು ಈವೆಂಟ್ ವೇಳಾಪಟ್ಟಿಯ ಪ್ರಕಾರ ಸಮಾನವಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ' ಎಂದು ಪ್ರಕಟಣೆ ತಿಳಿಸಿದೆ.