ಅಹ್ಮದಾಬಾದ್: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಇಂದು ಮತ್ತೊಂದು ರಣರೋಚಕ ಕದನ ನಡೆದಿದ್ದು, ದಕ್ಷಿಣ ಆಫ್ರಿಕಾ ಮತ್ತು ಆಫ್ಘಾನಿಸ್ತಾನ ನಡುವಿನ ಪಂದ್ಯ ಬರೊಬ್ಬರಿ 2 ಸೂಪರ್ ಓವರ್ ಗಳ ಮೂಲಕ ಅಂತ್ಯಕಂಡಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ ನಿಗದಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತ್ತು. ಗೆಲ್ಲಲು 188 ರನ್ ಗುರಿ ಪಡೆದ ಆಫ್ಘಾನಿಸ್ತಾನ ವೀರೋಚಿತ ಹೋರಾಟ ನೀಡಿ 19.4 ಓವರ್ ನಲ್ಲಿ 187 ರನ್ ಗಳಿಸಿ ಆಲೌಟ್ ಆಯಿತು. ಪಂದ್ಯ ಟೈ ಆದ ಕಾರಣ ಫಲಿತಾಂಶಕ್ಕಾಗಿ ಅಂಪೈರ್ ಗಳು ಸೂಪರ್ ಓವರ್ ಮೊರೆ ಹೋದರು.
ಸೂಪರ್ ಓವರ್ ಕೂಡ ಟೈ!
ಆಫ್ರಿಕಾದ ಲುಂಗಿ ಎನ್ಗಿಡಿ ಎಸೆದ ಸೂಪರ್ ಓವರ್ ನಲ್ಲಿ ಆಫ್ಘಾನಿಸ್ತಾನ ಒಂದು ಸಿಕ್ಸರ್, ಒಂದು ಬೌಂಡರಿ ಸಹಿತ 17 ರನ್ ಕಲೆಹಾಕಿತು. ಇದನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ಕೂಡ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 17 ರನ್ ಗಳನ್ನು ಕಲೆಹಾಕಿತು. ಆಫ್ಘಾನಿಸ್ತಾನದ ಫರೂಕಿ ಎಸೆದ ಸೂಪರ್ ಓವರ್ ನಲ್ಲಿ ದಕ್ಷಿಣ ಆಫ್ರಿಕಾ 5 ಎಸೆತದಲ್ಲಿ 1 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತ್ತು.
ಹೀಗಾಗಿ ಅಂತಿಮ ಎಸೆತದಲ್ಲಿ ಆಫ್ರಿಕಾಗೆ 7ರನ್ ಅವಶ್ಯಕತೆ ಇತ್ತು. ಕ್ರೀಸ್ ನಲ್ಲಿದ್ದ ಸ್ಟಬ್ಸ್ ಅಂತಿಮ ಎಸೆತವನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ಸ್ಕೋರ್ ಸಮಬಲ ಮಾಡಿದರು. ಹೀಗಾಗಿ ಈ ಪಂದ್ಯ 2ನೇ ಸೂಪರ್ ಓವರ್ ಗೆ ತಿರುಗಿತು.
2ನೇ ಸೂಪರ್ ಓವರ್
ಇನ್ನು 2ನೇ ಸೂಪರ್ ಓವರ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ 3 ಸಿಕ್ಸರ್ ಸಹಿತ 23 ರನ್ ಪೇರಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ 2ನೇ ಎಸೆತದಲ್ಲೇ ನಬಿ ಅವರ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ಕ್ರೀಸ್ ಗೆ ಬಂದ ಗುರ್ಬಾಜ್ 3, 4 ಮತ್ತು 5ನೇ ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಈ ಹಂತದಲ್ಲಿ ಕೇಶವ್ ಮಹಾರಾಜ ಎಸೆದ 6ನೇ ಎಸೆತ ವೈಡ್ ಆಯಿತು. ಈ ಹಂತದಲ್ಲಿ ಆಫ್ಘಾನಿಸ್ತಾನಕ್ಕೆ ಗೆಲ್ಲಲು 1 ಎಸೆತದಲ್ಲಿ 6 ರನ್ ಅವಶ್ಯಕತೆ ಇತ್ತು. 6ನೇ ಎಸೆತದಲ್ಲಿ ಗುರ್ಬಾಜ್ ಮಿಲ್ಲರ್ ಗೆ ಕ್ಯಾಚ್ ನೀಡಿ ಔಟಾದರು. ಹೀಗಾಗಿ ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದು ಬೀಗಿತು.
ಪದೇ ಪದೇ ಮುಳುವಾಗುತ್ತಿದೆ super Over
ಇನ್ನು ಸೂಪರ್ ಓವರ್ ನಲ್ಲಿ ಆಫ್ಘಾನಿಸ್ತಾನ ಸೋಲುತ್ತಿರುವುದು ಇದೇ ಮೊದಲೇನಲ್ಲ.. 3ನೇ ಬಾರಿ.. ಈ ಹಿಂದೆ 2020ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಆಫ್ಘಾನಿಸ್ತಾನ ಸೋಲು ಕಂಡಿತ್ತು. ಬಳಿಕ 2024ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲೂ 2ನೇ ಸೂಪರ್ ಓವರ್ ನಲ್ಲಿ ಆಫ್ಘಾನಿಸ್ತಾನ ಸೋಲು ಕಂಡಿತ್ತು. ಇದೀಗ ಇಂದು ಮತ್ತೊಂದು 2ನೇ ಸೂಪರ್ ಓವರ್ ನಲ್ಲಿ ಸೋಲುಕಂಡಿದೆ.
Afghanistan tied games result (T20I)
Lost vs IRE, Noida, 2020
Lost vs IND, Bengaluru, 2024 (in 2nd super over)
Lost vs SA, Ahmedabad, 2026 WC (in 2nd super over)
ದಕ್ಷಿಣ ಆಫ್ರಿಕಾಗೆ 2ನೇ ಸೂಪರ್ ಓವರ್ ಗೆಲುವು
ಇನ್ನು ಇದು ದಕ್ಷಿಣ ಆಫ್ರಿಕಾಗೆ 2ನೇ ಸೂಪರ್ ಓವರ್ ಗೆಲುವಾಗಿದೆ. ಈ ಹಿಂದೆ 2019ರಲ್ಲಿ ಕೇಪ್ಟೌನ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಹರಿಣಗಳು ಜಯಭೇರಿ ಬಾರಿಸಿದ್ದರು.
South Africa tied games result (T20I)
Won vs SL, Cape Town, 2019
Won vs AFG, Ahmedabad, 2026 WC
ಟಿ20 ವಿಶ್ವಕಪ್ ನಲ್ಲಿ ಟೈ ಇತಿಹಾಸ
ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈ ವರೆಗೂ 6 ಪಂದ್ಯಗಳು ಟೈ ಆಗಿದ್ದು, ಮೊದಲ ಬಾರಿಗೆ 2007ರಲ್ಲಿ ಭಾರತ VS ಪಾಕಿಸ್ತಾನ ಪಂದ್ಯ ಟೈ ಆಗಿತ್ತು. ಅಂದು ಬೌಲೌಟ್ ಮಾದರಿಯಲ್ಲಿ ಭಾರತ ಗೆದ್ದು ಬೀಗಿತ್ತು. ಬಳಿಕ 2012ರಲ್ಲಿ ಪಳ್ಳೆಕಿಲೆಯಲ್ಲಿ ಶ್ರೀಲಂಕಾ VS ನ್ಯೂಜಿಲೆಂಡ್ ಮತ್ತು ನ್ಯೂಜಿಲೆಂಡ್ VS ವೆಸ್ಟ್ ಇಂಡೀಸ್ ಪಂದ್ಯಗಳು ಟೈ ಆಗಿದ್ದವು. ಬಳಿಕ 2024ರ ಟಿ20 ವಿಶ್ವಕಪ್ ನಲ್ಲೂ 2 ಪಂದ್ಯಗಳು ಟೈ ಆಗಿದ್ದವು. ನಮೀಬಿಯಾ VS ಒಮನ್, ಅಮೆರಿಕ VS ಪಾಕಿಸ್ತಾನ ಪಂದ್ಯ ಟೈ ಆಗಿತ್ತು.
Tied matches in the T20 WCs
IND vs PAK, Durban, 2007
SL vs NZ, Pallekele, 2012
NZ vs WI, Pallekele, 2012
NAM vs OMA, Bridgetown, 2024
USA vs PAK, Dallas, 2024
SA vs AFG, Ahmedabad, 2026*
3 ಬಾರಿ ಡಬಲ್ ಸೂಪರ್ ಓವರ್
ಟಿ20 ಕ್ರಿಕೆಟ್ ಇತಿಹಾಸದಲ್ಲಿ 3 ಬಾರಿ ಡಬಲ್ ಸೂಪರ್ ಓವರ್ ಗಳು ನಡೆದಿವೆ. ಈ ಪೈಕಿ ಇದೇ ಆಫ್ಘಾನಿಸ್ತಾನವೇ 2 ಬಾರಿ ಆಡಿ ಸೋತಿದೆ.
1. ಮುಂಬೈ ಇಂಡಿಯನ್ಸ್ VS ಪಂಜಾಬ್ ಕಿಂಗ್ಸ್
ಇನ್ನು ಟಿ20 ಇತಿಹಾಸದಲ್ಲಿ ಮೂರು ಬಾರಿ ಡಬಲ್ ಸೂಪರ್ ಓವರ್ ಪಂದ್ಯಗಳು ದಾಖಲಾಗಿದ್ದು, 2020ರ ಐಪಿಎಲ್ ಟೂರ್ನಿಯಲ್ಲಿ ಮೊಟ್ಟ ಮೊದಲ ಡಬಲ್ ಸೂಪರ್ ಓವರ್ ದಾಖಲಾಗಿತ್ತು. ಅಂದು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಮೊಟ್ಟ ಮೊದಲ ಡಬಲ್ ಸೂಪರ್ ಓವರ್ ದಾಖಲಾಗಿತ್ತು. ಅಂದಿನ ಪಂದ್ಯದಲ್ಲಿ ಪಂಜಾಬ್ ಗೆದ್ದು ಬೀಗಿತ್ತು.
2. ಭಾರತ VS ಆಫ್ಘಾನಿಸ್ತಾನ
2024ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲೂ ಡಬಲ್ ಸೂಪರ್ ಓವರ್ ಆಗಿತ್ತು. ಎರಡನೇ ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ 11 ರನ್ ಕಲೆಹಾಕಿತ್ತು. ಆದರೆ ಈ ಮೊತ್ತವನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ಭಾರತ ರವಿ ಬಿಷ್ಣೋಯ್ ಅವರ ಅದ್ಭುತ ಬೌಲಿಂಗ್ ನಿಂದಾಗಿ ಗೆಲುವು ಸಾಧಿಸಿತು. ರವಿ ಬಿಷ್ಣೋಯ್ ಮೊದಲ ಮೂರು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಲ್ಲದೆ ಭಾರತ ಸರಣಿಯನ್ನು ವೈಟ್‌ವಾಶ್ ಮಾಡಿತ್ತು.
3 ಸೂಪರ್ ಓವರ್ ಕಂಡಿದ್ದ ಪಂದ್ಯ
ಇನ್ನು 2025ರಲ್ಲಿ ನೆದರ್ಲೆಂಡ್ VS ನೇಪಾಳ ಒಂದಲ್ಲ.. ಎರಡಲ್ಲ... ಮೂರು ಸೂಪರ್ ಓವರ್ ಕಂಡಿತ್ತು. 2025ರ ಜೂನ್ ನಲ್ಲಿ ನಡೆದಿದ್ದ ನೆದರ್ಲೆಂಡ್, ನೇಪಾಳ ಮತ್ತು ಸ್ಕಾಟ್ಲೆಂಡ್ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ಅಪರೂಪದ ವಿದ್ಯಮಾನ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್ಲೆಂಡ್ 7 ವಿಕೆಟ್ ನಷ್ಟಕ್ಕೆ 152 ರನ್ ಕಲೆಹಾಕಿತ್ತು.
ಇದಕ್ಕೆ ಉತ್ತರವಾಗಿ ನೇಪಾಳ ಕೂಡ 8 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿದ್ದಾಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗಿತ್ತು. ಮೊದಲ ಸೂಪರ್ ಓವರ್ ನಲ್ಲಿ ಉಭಯ ತಂಡಗಳು ತಲಾ 19 ರನ್ ಕಲೆಹಾಕಿದ್ದವು. ಹೀಗಾಗಿ 2ನೇ ಸೂಪರ್ ಓವರ್ ಆಡಿಸಲಾಗಿತ್ತು. ಆದರೆ ಅಲ್ಲಿಯೂ ಉಭಯ ತಂಡಗಳು 17 ರನ್ ಕಲೆ ಹಾಕಿದಾಗ ಅಂಪೈರ್ ಗಳು ಅನಿವಾರ್ಯವಾಗಿ 3ನೇ ಸೂಪರ್ ಓವರ್ ಗೆ ಮೊರೆ ಹೋದರು.
3ನೇ ಸೂಪರ್ ಓವರ್
ಮೂರನೇ ಸೂಪರ್ ಓವರ್‌ನಲ್ಲಿ, ನೆದರ್ಲ್ಯಾಂಡ್ಸ್ ಜ್ಯಾಕ್ ಲಯನ್-ಕ್ಯಾಚೆಟ್ ನೇಪಾಳದ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಡಕೌಟ್ ಮಾಡಿದರು. ಹೀಗಾಗಿ ನೆದರ್ಲೆಂಡ್ ಗೆ ಗೆಲ್ಲಲು 1 ರನ್ ಟಾರ್ಗೆಟ್ ನೀಡಲಾಗಿತ್ತು. ನಂತರ, ಮೈಕೆಲ್ ಲೆವಿಟ್ ಮೊದಲ ಎಸೆತದಲ್ಲಿ ಸಿಕ್ಸರ್ ಗಳಿಸಿ ನೆದರ್ಲ್ಯಾಂಡ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.