ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನಮೀಬಿಯಾ ತಂಡವನ್ನು 93 ರನ್ ಗಳ ಅಂತರದಲ್ಲಿ ಮಣಿಸಿದ ಭಾರತ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಮುರಿದಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 210 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ನಮೀಬಿಯಾ 18.2 ಓವರ್ ನಲ್ಲಿ 116 ರನ್ ಗಳಿಗೆ ಆಲೌಟ್ ಆಗುವ ಮೂಲಕ 93 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎಲ್ಲ ವಿಭಾಗಲ್ಲೂ ಸಾಂಘಿಕ ಪ್ರದರ್ಶನ ನೀಡಿ ನಮೀಬಿಯಾ ವಿರುದ್ಧ ಅಮೋಘ ಗೆಲುವು ದಾಖಲಿಸಿತು. ಅಂತೆಯೇ ಮುಂಬರುವ ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಅವಕಾಶ ದೊರೆಯಿತು.
ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ
ಅಂತೆಯೇ ಈ ಅಮೋಘ ಗೆಲುವಿನೊಂದಿಗೆ ಭಾರತ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಜಯಗಳಿಸಿ 4 ಅಂಕ ಮತ್ತು +3.050 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನಕ್ಕೇರಿದೆ. ಪಾಕಿಸ್ತಾನ ಕೂಡ 2 ಪಂದ್ಯಗಳಲ್ಲಿ ಜಯಗಳಿಸಿ 4 ಅಂಕ ಮತ್ತು +0.932 ನೆಟ್ ರೇಟ್ ನೊಂದಿಗೆ 2ನೇ ಸ್ಥಾನದಲ್ಲಿದೆ. ಉಳಿದಂತೆ ತಾನಾಡಿರುವ 2 ಪಂದ್ಯಗಳಲ್ಲಿ 1 ಪಂದ್ಯ ಗೆದ್ದಿರುವ ನೆದರ್ಲೆಂಡ್ 2 ಅಂಕ ಮತ್ತು +0.356 ನೆಟ್ ರನ್ ರೇಟ್ ನೊಂದಿಗೆ 3ನೇ ಸ್ಥಾನದಲ್ಲಿದೆ.
ದಾಖಲೆಗಳ ಸುರಿಮಳೆ, ಪವರ್ ಪ್ಲೇ ಗರಿಷ್ಛ ಸ್ಕೋರ್
ಇನ್ನು ಈ ಪಂದ್ಯದಲ್ಲಿ ಭಾರತ ತಂಡ ತನ್ನ ಭರ್ಜರಿ ಬ್ಯಾಟಿಂಗ್ ಮೂಲಕ ಅನೇಕ ದಾಖಲೆಗಳನ್ನು ಸೃಷ್ಟಿಸಿದೆ. ಆರಂಭಿಕ ಆಘಾತದ ಹೊರತಾಗಿಯೂ ಭಾರತದ ಇಶಾನ್ ಕಿಶನ್ (61) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಬೌಂಡರಿ ಸಿಕ್ಸರ್ ಗಳ ಮಳೆಗರೆದ ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿಯೇ ಅರ್ಧಶತಕ ಸಿಡಿಸಿದರು.
ಇಂದಿನ ಪಂದ್ಯದಲ್ಲಿ ಭಾರತ ಪವರ್ ಪ್ಲೇ ನಲ್ಲಿ ಕೇವಲ 6 ಓವರ್ ನಲ್ಲಿ 1 ವಿಕೆಟ್ ಕಳೆದುಕೊಂಡು 86ರನ್ ಪೇರಿಸಿತು. ಆ ಮೂಲಕ ಭಾರತ ತಂಡ ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪವರ್ ಪ್ಲೇ ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಮೊದಲ ತಂಡ ಎಂಬ ಕೀರ್ತಿಗೂ ಭಾಜನವಾಯಿತು.
4ನೇ ಗರಿಷ್ಠ ಪವರ್ ಪ್ಲೇ ಸ್ಕೋರ್
ಇನ್ನು ಇಂದು ಭಾರತ ಪವರ್ ಪ್ಲೇ ನಲ್ಲಿ ಗಳಿಸಿದ 86 ರನ್ ಗಳು ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಪವರ್ ಪ್ಲೇನಲ್ಲಿ ದಾಖಲಾದ 4ನೇ ಗರಿಷ್ಟ ಸ್ಕೋರ್ ಆಗಿದೆ. ಇದಕ್ಕೂ ಮೊದಲು 2024ರಲ್ಲಿ ಆಫ್ಘಾನಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ 6 ಓವರ್ ನಲ್ಲಿ 92 ರನ್ ಕಲೆಹಾಕಿತ್ತು. ಇದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪವರ್ ಪ್ಲೇ ನಲ್ಲಿ ದಾಖಲಾದ ಗರಿಷ್ಛ ಸ್ಕೋರ್ ಆಗಿದೆ.
Highest powerplay scores in T20 WC
92/1 - WI vs AFG, Gros Islet, 2024
91/1 - NED vs IRE, Sylhet, 2014
89/3 - ENG vs SA, Mumbai WS, 2016
86/1 - IND vs NAM, Delhi, 2026
ಪವರ್ ಪ್ಲೇ ನಲ್ಲಿ ಭಾರತದ 3ನೇ ಗರಿಷ್ಟ ಸ್ಕೋರ್
ಅಂತೆಯೇ ಇದು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪವರ್ ಪ್ಲೇ ನಲ್ಲಿ ಭಾರತ ಗಳಿಸಿದ 3ನೇ ಗರಿಷ್ಠ ಸ್ಕೋರ್ ಇದಾಗಿದೆ. ಇದಕ್ಕೂ ಮೊದಲು 2025ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 95 ರನ್ ಪೇರಿಸಿತ್ತು. ಬಳಿಕ ಇದೇ ವರ್ಷ ನ್ಯೂಜಿಲೆಂಡ್ ವಿರುದ್ಧ ಪವರ್ ಪ್ಲೇ ನಲ್ಲಿ 94 ರನ್ ಪೇರಿಸಿತ್ತು.
India’s highest powerplay scores in T20Is
95/1 vs ENG, Mumbai WS, 2025
94/2 vs NZ, Guwahati, 2026
86/1 vs NAM, Delhi, 2026 T20 WC
82/2 vs SCOT, Dubai, 2021 T20 WC
82/1 vs BAN, Hyderabad, 2024
ಟಿ20 ಇತಿಹಾಸದ ಅಮೋಘ ದಾಖಲೆ ಬರೆದ ಭಾರತ!
ಇಂದಿನ ಪಂದ್ಯದಲ್ಲಿ ಭಾರತ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದು, ಟಿ20 ಇತಿಹಾಸದಲ್ಲೇ ತಂಡವೊಂದು ವೇಗದ 100 ರನ್ ಗಳಿಸಿದ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಭಾರತ ಕೇವಲ 6.5 ಓವರ್‌ಗಳಲ್ಲಿ 100 ರನ್‌ಗಳನ್ನು ತಲುಪಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ತಂಡದ ಶತಕವಾಗಿದೆ.
ಇದಕ್ಕೂ ಮೊದಲು 2014 ರಲ್ಲಿ ಸಿಲ್ಹೆಟ್‌ನಲ್ಲಿ ಐರ್ಲೆಂಡ್ ವಿರುದ್ಧ ನೆದರ್ಲ್ಯಾಂಡ್ಸ್ 7 ಓವರ್ ನಲ್ಲಿ ಶತಕ ಸ್ಕೋರ್ ಮಾಡಿತ್ತು. ಇದು ಟಿ20 ಇತಿಹಾಸದಲ್ಲಿ ದಾಖಲಾಗಿದ್ದ ವೇಗದ 100 ರನ್ ಗಳಾಗಿತ್ತು. ಭಾರತ ಇದೀಗ ಈ ದಾಖಲೆಯನ್ನು ಮುರಿದಿದೆ.