ಕೊಲಂಬೊ: ಭಾನುವಾರ ಇಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026ರ ಪಂದ್ಯದ ನಂತರ ಅಥವಾ ಟಾಸ್ ಸಮಯದಲ್ಲಿ ಭಾರತೀಯ ಆಟಗಾರರೊಂದಿಗೆ ಕೈಕುಲುಕುವ ಬಗ್ಗೆ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ಸಸ್ಪೆನ್ಸ್ ಮುಂದುವರೆಸಿದರು. ಆದರೆ, ಪಂದ್ಯವನ್ನು ಯಾವ ಉತ್ಸಾಹದಲ್ಲಿ ಆಡಬೇಕೋ ಅದೇ ರೀತಿಯಲ್ಲಿ ಆಡಬೇಕೆಂದು ಹೇಳಿದರು.
ಕಳೆದ ವರ್ಷ ಪಹಲ್ಗಾಮ್ ಭಯೋತ್ಪಾದನಾ ದಾಳಿ ಮತ್ತು ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ ನಂತರ ನಡೆದ ಏಷ್ಯಾಕಪ್ ವೇಳೆ ಮೂರು ಭಾರಿ ಮುಖಾಮುಖಿಯಾದರೂ ಭಾರತ ಮತ್ತು ಪಾಕಿಸ್ತಾನ ಆಟಗಾರರು ಪರಸ್ಪರ ಕೈಕುಲುಕಿಲ್ಲ.
'ನಾವು ಅದರ ಬಗ್ಗೆ ನಾಳೆ ನೋಡೋಣ. ಆದಾಗ್ಯೂ, ಯಾವುದೇ ಸಂದರ್ಭದಲ್ಲೂ 'ಸ್ಪಿರಿಟ್ ಆಫ್ ದಿ ಗೇಮ್' ಅನ್ನು ಎತ್ತಿಹಿಡಿಯಬೇಕು' ಎಂದು ಶನಿವಾರ ಇಲ್ಲಿ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹ್ಯಾಂಡ್‌ಶೇಕ್ ಸಾಧ್ಯತೆ ಬಗ್ಗೆ ಆಘಾ ಪ್ರತಿಕ್ರಿಯೆ ನೀಡಿದರು.
'ಕ್ರಿಕೆಟ್ ಅನ್ನು (ಸರಿಯಾದ) ಉತ್ಸಾಹದಲ್ಲಿ ಆಡಬೇಕು. ನನ್ನ ವೈಯಕ್ತಿಕ ಅಭಿಪ್ರಾಯವು ಅಪ್ರಸ್ತುತವಾಗಬಹುದು. ಆದರೆ, ಕ್ರಿಕೆಟ್ ಅನ್ನು ಯಾವಾಗಲೂ ಹೇಗೆ ಆಡಬೇಕೆಂದು ಉದ್ದೇಶಿಸಲಾಗಿದೆಯೋ ಅದರ ಪ್ರಕಾರವೇ ಆಡಬೇಕು. ಏನು ಮಾಡಬೇಕೆಂದು ನಿರ್ಧರಿಸುವುದು ಅವರ ಜವಾಬ್ದಾರಿಯಾಗಿದೆ' ಎಂದು ಆಘಾ ಹೇಳಿದರು.
ಹೊಟ್ಟೆ ಸೋಂಕಿನಿಂದ ಬಳಲುತ್ತಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ, ನಮೀಬಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಫಿಟ್ ಆಗುವ ನಿರೀಕ್ಷೆಯಿದೆ.
'ಅಭಿಷೇಕ್ ಶರ್ಮಾ ನಾಳೆ ಆಡುತ್ತಾರೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವು ಅತ್ಯುತ್ತಮ ಆಟಗಾರರ ವಿರುದ್ಧ ಆಡಲು ಬಯಸುತ್ತೇವೆ' ಎಂದು ಆಘಾ ಪಂದ್ಯದ ಮುನ್ನಾದಿನ ವರದಿಗಾರರಿಗೆ ತಿಳಿಸಿದರು.
ಐಸಿಸಿ ಮುಖ್ಯಸ್ಥ ಜಯ್ ಶಾ ಭಾನುವಾರ ಕೊಲಂಬೊದಲ್ಲಿ ಇರಲಿದ್ದಾರೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಸಭೆ ನಡೆಸಬಹುದು.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಕೊಲಂಬೊದಲ್ಲಿ ಇರುವುದಾಗಿ ಹೇಳಿದ್ದರು. ಬಾಂಗ್ಲಾದೇಶದ ಪತ್ರಿಕೆ 'ಪ್ರಥಮ್ ಅಲೋ' ಜೊತೆ ಮಾತನಾಡಿದ ಇಸ್ಲಾಂ, ಐಸಿಸಿಯಿಂದ ಈ ಹೈ ಪ್ರೊಫೈಲ್ ಪಂದ್ಯಕ್ಕೆ ಆಹ್ವಾನ ಬಂದಿದೆ ಎಂದು ಹೇಳಿದರು.
'ಐಸಿಸಿಯ ಪ್ರಮುಖ ಪಾಲುದಾರರು ಈ ಐದು ಏಷ್ಯಾದ ದೇಶಗಳು. 15 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕಾಗಿ, ಎಲ್ಲ ಐದು ದೇಶಗಳ ಪ್ರತಿನಿಧಿಗಳು ಒಟ್ಟಿಗೆ ಮೈದಾನದಲ್ಲಿ ಹಾಜರಿರಬೇಕು, ಒಟ್ಟಿಗೆ ಪಂದ್ಯವನ್ನು ವೀಕ್ಷಿಸಬೇಕು ಮತ್ತು ಪರಸ್ಪರ ಮಾತನಾಡಬೇಕು ಎಂದು ಅವರು ಬಯಸುತ್ತಾರೆ' ಎಂದು ಇಸ್ಲಾಂ ಹೇಳಿದ್ದರು.