ನವದೆಹಲಿ: ಐಪಿಎಲ್ 2026 ಆರಂಭಕ್ಕೆ ಸಿದ್ಧತೆಗಳು ಆರಂಭವಾಗಿರುವಂತೆಯೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ತಲೆನೋವು ಆರಂಭವಾಗಿದ್ದು ತಂಡದ ನಾಯಕ ಸೇರಿ ಬರೊಬ್ಬರಿ 4 ಸ್ಟಾರ್ ಆಟಗಾರರು ಗಾಯಗೊಂಡಿದ್ದಾರೆ.
2026 ರ ಟಿ20 ವಿಶ್ವಕಪ್ ಮುಗಿದ ತಕ್ಷಣ, ಐಪಿಎಲ್ ಸೀಸನ್ ಆರಂಭವಾಗಲಿದ್ದು, ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಎಲ್ಲಾ 10 ತಂಡಗಳು ಈಗಾಗಲೇ ತಮ್ಮ ಆಟಗಾರರನ್ನು ಆಯ್ಕೆ ಮಾಡಿವೆ. ಆದರೆ ಮುಂದಿನ ಆವೃತ್ತಿಯ ಐಪಿಎಲ್ ಪ್ರಾರಂಭವಾಗುವ ಮೊದಲೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಆಘಾತವೆಂಬಂತೆ ತಂಡದ ನಾಲ್ವರು ಸ್ಟಾರ್ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ.
ಹೌದು.. 2026ರ ಐಪಿಎಲ್ ಸೀಸನ್ ಪ್ರಾರಂಭವಾಗುವ ಮುನ್ನವೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಆರ್ ಸಿಬಿ ನಾಯಕ ರಜತ್ ಪಾಟಿದಾರ್, ಸ್ಟಾರ್ ಬೌಲರ್ ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಟಾರ್ ಆಲ್ರೌಂಡರ್ ಟಿಮ್ ಡೇವಿಡ್, ಫಿಲ್ ಸಾಲ್ಟ್ ಸೇರಿದಂತೆ ನಾಲ್ವರು ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ.
ಈ ನಾಲ್ವರು ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದು, ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದ್ದರಿಂದ, ಈ ನಾಲ್ವರು ಇಂಜುರಿ ಆರ್‌ಸಿಬಿ ತಂಡವನ್ನು ಚಿಂತೆಗೀಡುಮಾಡಿದೆ.
ಈ ಸ್ಟಾರ್ ಆಟಗಾರರ ಗಾಯದ ಸಮಸ್ಯೆ ಆರ್‌ಸಿಬಿ ತಂಡದ ಪ್ಲೇಯಿಂಗ್ XI ಬಗ್ಗೆ ಚಿಂತೆಗೀಡುಮಾಡಿದ್ದು, IPL 2026 ಅಭಿಯಾನಕ್ಕೆ ಕಠಿಣ ಸವಾಲು ಎದುರಾಗಿದೆ. ಹಾಗೆಯೇ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ನಾಯಕ ರಜತ್ ಪಾಟಿದಾರ್ ಕೂಡ ಗಾಯಕ್ಕೆ ತುತ್ತಾಗಿದ್ದಾರೆ.
ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವ ಪಾಟಿದಾರ್ ಅವರ ಗಾಯದ ತೀವ್ರತೆ ಸದ್ಯಕ್ಕೆ ತಿಳಿದಿಲ್ಲ. ಆದರೆ ಪಾಟಿದರ್ ಗಾಯಗೊಂಡಿರುವುದು ಐಪಿಎಲ್ 2026 ರ ಆರಂಭಕ್ಕೂ ಮುಂಚಿತವಾಗಿ ಆರ್‌ಸಿಬಿ ತಂಡದ ಆತಂಕಕ್ಕೆ ಕಾರಣವಾಗಿದೆ.
ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಬಿಗ್ ಬ್ಯಾಷ್ ಲೀಗ್ ಸಮಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಪರ್ತ್ ಕ್ರೀಡಾಂಗಣದಲ್ಲಿ ನಡೆದ ಹೋಬಾರ್ಟ್ ಹರಿಕೇನ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ನಡುವಿನ ಪಂದ್ಯದ ಸಮಯದಲ್ಲಿ ಡೇವಿಡ್ ಗಾಯಗೊಂಡಿದ್ದರು. ಇದು ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ಮಾತ್ರವಲ್ಲದೆ 2026 ರ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾಕ್ಕೂ ಅಷ್ಟೇ ಆತಂಕಕಾರಿಯಾಗಿದೆ.
ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಐಪಿಎಲ್ 2026 ಕ್ಕೂ ಮುನ್ನ ಗಾಯಗೊಂಡಿರುವುದು ಆರ್‌ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಹೇಜಲ್‌ವುಡ್ ಕಳೆದ ನವೆಂಬರ್ನಿಂದಲೂ ಗಾಯದಿಂದ ಬಳಲುತ್ತಿದ್ದು, ಇದರ ಪರಿಣಾಮವಾಗಿ ಅವರನ್ನು ಆಶಸ್ ಸರಣಿಯಿಂದಲೂ ಹೊರಗಿಡಲಾಗಿದೆ.
ಫಿಲ್ ಸಾಲ್ಟ್ ಪ್ರಸ್ತುತ ILT20 ಲೀಗ್ನಲ್ಲಿ ಅಬುದಾಭಿ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಆದರೆ ಈ ಟಿ20 ಲೀಗ್ನಲ್ಲಿ ಬೆನ್ನಿನ ಗಾಯದಿಂದ ಬಳಲುತ್ತಿರುವ ಫಿಲ್ ಸಾಲ್ಟ್ ILT20 ಲೀಗ್ನ ಅರ್ಹತಾ ಪಂದ್ಯಗಳಿಂದ ಹೊರಗುಳಿದಿದ್ದರು.