ನವದೆಹಲಿ: ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳಿಗೆ ತಗಾದೆ ತೆಗೆದಿದ್ದ ಬಾಂಗ್ಲಾದೇಶಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇದೀಗ ಎರಡು ಹೊಸ ಮೈದಾನಗಳ ಆಯ್ಕೆ ನೀಡಿದೆ.
ಹೌದು.. ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಬಾಂಗ್ಲಾದೇಶ ತಾವು ಆಡುವ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಮನವಿ ಮಾಡಿದೆ.
ಈಗಾಗಲೇ ಬಾಂಗ್ಲಾದೇಶದ ಪಂದ್ಯಗಳು ಕೊಲ್ಕತ್ತ ಹಾಗೂ ಮುಂಬೈನಲ್ಲಿ ನಿಗದಿಯಾಗಿವೆ. ಆದರೆ, ಭದ್ರತಾ ದೃಷ್ಟಿಯಿಂದ ಭಾರತದಲ್ಲಿ ಆಡುವುದಿಲ್ಲ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ) ತಿಳಿಸಿದೆ.
ಬಾಂಗ್ಲಾ ಕ್ರಿಕೆಟ್ ಬೋರ್ಡ್, ಭದ್ರತಾ ದೃಷ್ಟಿಯಿಂದ ಇಂದು ಅಥವಾ ನಾಳೆ (ಸೋಮವಾರ, ಮಂಗಳವಾರ) ಒಳಗಾಗಿ ತಮ್ಮ ತಂಡ ಆಡುವ ಪಂದ್ಯಗಳನ್ನು ಬೇರೆ ಮೈದಾನಗಳಿಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿದ್ದು, ಬಾಂಗ್ಲಾದೇಶದ ಮನವಿಗೆ ಐಸಿಸಿ ಪ್ರತಿಕ್ರಿಯಿಸಿದ್ದು, ಕೊಲ್ಕತ್ತ ಹಾಗೂ ಮುಂಬೈನಲ್ಲಿ ಆಯೋಜನೆಗೊಂಡಿರುವ ಪಂದ್ಯಗಳನ್ನು ಚೆನ್ನೈ ಮತ್ತು ತಿರುವನಂತಪುರದಲ್ಲಿ ಆಡುವಂತೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ನಡೆದ ಬಳಿಕ ಬಿಸಿಸಿಐ ಸಲಹೆಯ ಮೇರೆಗೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಲು 9.20 ಕೋಟಿ ರೂಗೆ ಆಯ್ಕೆಯಾಗಿದ್ದ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡಲಾಯಿತು.
ಇದಾದ ಬಳಿಕ, ಬಾಂಗ್ಲಾ ತಂಡ ಭಾರತದಲ್ಲಿ ಕ್ರಿಕೆಟ್ ಆಡದಿರಲು ನಿರ್ಧರಿಸಿದ್ದು, ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾಗೆ ವರ್ಗಾಯಿಸಲು ಐಸಿಸಿಗೆ ಮನವಿ ಸಲ್ಲಿಸಿದೆ.
ಇದಕ್ಕೂ ಮೊದಲು, ಬಾಂಗ್ಲಾದೇಶವು ಚೆನ್ನೈ ಕ್ರೀಡಾಂಗಣದ ಆಯ್ಕೆಗಳನ್ನು ತಿರಸ್ಕರಿಸಿತು. ಬಿಸಿಬಿ ಅಧ್ಯಕ್ಷ ಅಮೀನುಲ್ ಇಸ್ಲಾಂ ಅವರು ತಮ್ಮ ಸರ್ಕಾರವು ಅದನ್ನು ಸ್ವೀಕರಿಸಬಹುದು ಎಂದು ಹೇಳಿದ್ದರು.
"ಈ ವಿಶ್ವಕಪ್‌ಗೆ ಸಂಬಂಧಿಸಿದಂತೆ ನಾವು ಏಕಾಂಗಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ನಿಮಗೆ ತಿಳಿದಿರುವುದರಿಂದ, ನಾವು ಸರ್ಕಾರದೊಂದಿಗೆ ಚರ್ಚಿಸುತ್ತೇವೆ ಮತ್ತು ನಾವು ಇನ್ನೂ ನಮ್ಮ ನಿಲುವಿನಲ್ಲೇ ಇದ್ದೇವೆ" ಎಂದು ಅವರು ಸಿಲ್ಹೆಟ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.