2027ರ ವಿಶ್ವಕಪ್‌ಗಾಗಿ ತಂಡದ ಯೋಜನೆಗಳಿಂದ ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಹೊರಗಿಡಲಾಗಿದೆ ಎಂಬ ಊಹಾಪೋಹಗಳನ್ನು ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ತಳ್ಳಿಹಾಕಿದ್ದಾರೆ. ಕಳೆದ ವರ್ಷ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಹಿನ್ನೆಲೆಯಲ್ಲಿ, ಅಂದಿನಿಂದ ಈ ಅನುಭವಿ ಜೋಡಿ ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿರುವುದರ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ರೋ-ಕೊ ತಂಡದ ಸಕ್ರಿಯ ಭಾಗವಾಗಿ ಮುಂದುವರೆದಿದ್ದಾರೆ ಮತ್ತು ಅವರು ತಮ್ಮ ಆಲೋಚನೆಗಳನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಚರ್ಚಿಸುತ್ತಾರೆ ಎಂದು ಕೋಟಕ್ ಹೇಳಿದ್ದಾರೆ.
ಭಾರತ vs ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಕ್, ಖಂಡಿತವಾಗಿಯೂ ವಿರಾಟ್ ಮತ್ತು ರೋಹಿತ್ ಭಾರತದ ವಿಶ್ವಕಪ್ ಯೋಜನೆಗಳಲ್ಲಿ ಭಾಗವಾಗಿದ್ದಾರೆ. ಅವರು ಒಂದೇ ಸ್ವರೂಪದಲ್ಲಿ ಆಡುತ್ತಿರುವುದರಿಂದ ತಂಡವು ಎಲ್ಲೆಡೆ ಗೆಲ್ಲಬೇಕೆಂದು ಅವರು ಈಗ ಬಯಸುತ್ತಾರೆ. ಈ ಜೋಡಿ ಇತರ ಆಟಗಾರರೊಂದಿಗೆ ಬಹಳಷ್ಟು ವಿಚಾರಗಳನ್ನು ಹಂಚಿಕೊಳ್ಳುವುದಲ್ಲದೆ, ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಏಕದಿನ ಸ್ವರೂಪದ ಬಗ್ಗೆ ಚರ್ಚಿಸುತ್ತಾರೆ. ಚರ್ಚೆಯ ಸಮಯದಲ್ಲಿ ನಾನು ಹೆಚ್ಚಿನ ಸಮಯ ಇರುತ್ತಿದ್ದೆ ಮತ್ತು ಅವರು ಯಾವಾಗಲೂ ಜಿಜಿ ಜೊತೆ ಮಾತನಾಡುವುದನ್ನು ನೋಡಿದ್ದೇನೆ' ಎಂದು ಹೇಳಿದ್ದಾರೆ.
'ವಿರಾಟ್ ಮತ್ತು ರೋಹಿತ್ ಖಂಡಿತವಾಗಿಯೂ ಯೋಜನೆಯ ಭಾಗವಾಗಿದ್ದಾರೆ. ಈಗ ಅವರು ಒಂದೇ ಸ್ವರೂಪದಲ್ಲಿ ಆಡುತ್ತಿರುವುದರಿಂದ, ಅವರು ಅಲ್ಲಿರುವಾಗ ಭಾರತ ಎಲ್ಲೆಡೆ ಗೆಲ್ಲಬೇಕೆಂದು ಬಯಸುತ್ತಾರೆ. ಅವರು ಹೊಂದಿರುವ ಅನುಭವದೊಂದಿಗೆ, ಅವರು ಇತರ ಆಟಗಾರರೊಂದಿಗೆ ಬಹಳಷ್ಟು ವಿಚಾರಗಳನ್ನು ಹಂಚಿಕೊಳ್ಳಬಹುದು. ಅವರು ಗೌತಮ್ ಅವರೊಂದಿಗೆ ಏಕದಿನ ಸ್ವರೂಪ, ನಮ್ಮ ಮುಂದಿರುವ ಪಂದ್ಯಗಳು ಮತ್ತು ದಕ್ಷಿಣ ಆಫ್ರಿಕಾಕ್ಕಾಗಿ ನಮ್ಮ ಯೋಜನೆಗಳ ಬಗ್ಗೆ ಚರ್ಚಿಸುತ್ತಾರೆ' ಎಂದರು.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಂತರ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕಳೆದ 7 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 0, 0, 74, 135, 102, 65 ಮತ್ತು 93 ರನ್‌ಗಳನ್ನು ಗಳಿಸಿದ್ದಾರೆ. ರೋಹಿತ್ ಕೂಡ ತಮ್ಮ ಕೊನೆಯ ಕೆಲವು ಏಕದಿನ ಪಂದ್ಯಗಳಲ್ಲಿ 8, 73, 121, 57, 14, 75 ಮತ್ತು 26 ರನ್‌ಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ದೀರ್ಘ ವಿರಾಮ ತೆಗೆದುಕೊಂಡು 2025ರ ಐಪಿಎಲ್ ಸಮಯದಲ್ಲಿ ತಂಡಕ್ಕೆ ಮರಳುವ ಮೊದಲು ಈ ಜೋಡಿ ಇನ್ನೂ ಎರಡು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ.