ಇಂದೋರ್: ಭಾರತದ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 338 ರನ್ ಗಳ ಬೃಹತ್ ಗುರಿ ನೀಡಿದೆ.
ಇಂದೋರ್ ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ನಲ್ಲಿ ಡರಿಲ್ ಮಿಚೆಲ್ (137) ಮತ್ತು ಗ್ಲೇನ್ ಫಿಲಿಪ್ಸ್ (106) ಅವರ ಅಮೋಘ ಶತಕಗಳ ನೆರವಿನಿಂದ 8 ವಿಕೆಟ್ ಕಳೆದುಕೊಂಡು 337 ರನ್ ಪೇರಿಸಿತು.
ಆ ಮೂಲಕ ಭಾರತಕ್ಕೆ ಗೆಲ್ಲಲು 338 ರನ್ ಬೃಹತ್ ಗುರಿ ನೀಡಿದೆ.
ಭಾರತದ ಪರ ಅರ್ಶ್ ದೀಪ್ ಸಿಂಗ್, ಹರ್ಷದೀಪ್ ರಾಣಾ ತಲಾ ಮೂರು ವಿಕೆಟ್ ಪಡೆದರೆ, ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಭಾರತದ ವಿರುದ್ಧ ನ್ಯೂಜಿಲೆಂಡ್ 2ನೇ ದಾಖಲೆಯ ಜೊತೆಯಾಟ
ಡರಿಲ್ ಮಿಚೆಲ್ ಮತ್ತು ಗ್ಲೇನ್ ಫಿಲಿಪ್ಸ್ ಜೋಡಿ ಇಂದು ಗಳಿಸಿದ 219ರನ್ ಗಳ ಜೊತೆಯಾಟ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 2ನೇ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. ಈ ಹಿಂದೆ 2022ರಲ್ಲಿ ಆಕ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಟಾಮ್ ಲಾಥಮ್ ಮತ್ತು ಕೇನ್ ವಿಲಿಯಮ್ಸನ್ ಜೋಡಿ ಅಜೇಯ 221 ರನ್ ಜೊತೆಯಾಟವಾಡಿತ್ತು. ಇದು ಅಗ್ರಸ್ಥಾನದಲ್ಲಿದ್ದು, ಇಂದಿನ ಮಿಚೆಲ್ ಮತ್ತು ಫಿಲಿಪ್ಸ್ ಜೋಡಿ ಜೊತೆಯಾಟ 2ನೇ ಸ್ಥಾನಕ್ಕೇರಿದೆ.
Highest partnerships for NZ vs IND in ODIs (any wkts)
221* - T Latham, K Williamson, Auckland, 2022
219 - D Mitchell, G Phillips, Indore, 2026*
200 - T Latham, Ross Taylor, Wankhede, 2017
190 - S Styris, Ross Taylor, Dambulla, 2010
2 ಶತಕ
ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಇಬ್ಬರು ಸ್ಟಾರ್ ಆಟಗಾರರು ಶತಕ ಸಿಡಿಸಿದರು. ಕಳೆದ ಪಂದ್ಯದ ಹೀರೋ ಡರಿಲ್ ಮಿಚೆಲ್ ಮತ್ತು ಗ್ಲೇನ್ ಫಿಲಿಪ್ಸ್ ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು. ಪ್ರಮುಖವಾಗಿ ಆರಂಭಿಕ ಆಘಾತ ಎದುರಿಸಿದ್ದ ನ್ಯೂಜಿಲೆಂಡ್ ಇನ್ನಿಂಗ್ಸ್ ಗೆ ಜೀವ ತುಂಬಿದ್ದು ಡರಿಲ್ ಮಿಚೆಲ್. ಕೇವಲ 131 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿಗಳ ಸಹಿತ 137 ರನ್ ಸಿಡಿಸಿದರು.
ಅಂತೆಯೇ ಗ್ರೇನ್ ಫಿಲಿಪ್ಸ್ ಕೂಡ 88 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ 106 ರನ್ ಚಚ್ಚಿದರು. ಈ ಇಬ್ಬರೂ ಆಟಗಾರರ ಶತಕಗಳ ಪರಿಣಾಮ ನ್ಯೂಜಿಲೆಂಡ್ ಮೊತ್ತ 300ರ ಗಡಿ ದಾಟಿತು.
ದಾಖಲೆಯ ಜೊತೆಯಾಟ
ಅಂತೆಯೇ ನ್ಯೂಜಿಲೆಂಡ್ ಇನ್ನಿಂಗ್ಸ್ ನಲ್ಲಿ ಗ್ಲೇನ್ ಫಿಲಿಪ್ಸ್ ಮತ್ತು ಡರಿಲ್ ಮಿಚೆಲ್ ದಾಖಲೆಯ ಜೊತೆಯಾಟವಾಡಿದರು. ಕೇವಲ 58 ರನ್ ಗಳಿಗೇ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ಇನ್ನಿಂಗ್ಸ್ ಗೆ ಡರಿಲ್ ಮಿಚೆಲ್ ಮತ್ತು ಗ್ಲೇನ್ ಫಿಲಿಪ್ಸ್ ಜೀವ ತುಂಬಿದರು. ಈ ಜೋಡಿ 4ನೇ ಕ್ರಮಾಂಕದಲ್ಲಿ ಬರೊಬ್ಬರಿ 219 ರನ್ ಗಳ ಜೊತೆಯಾಟವಾಡಿತು.