ವರದಿಗಳ ಪ್ರಕಾರ, ಜನವರಿ 27 ರೊಳಗೆ ಐಪಿಎಲ್ 2026ನೇ ಆವೃತ್ತಿಗಾಗಿ ತಮ್ಮ ತವರು ಮೈದಾನ ಯಾವುದೆಂದು ದೃಢೀಕರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆ ಕೇಳಲಾಗಿದೆ. ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದ ನಂತರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕದ ಹಿನ್ನೆಲೆಯಲ್ಲಿ 2025ರ ಚಾಂಪಿಯನ್ ತಂಡ ಪುಣೆ ಮತ್ತು ನವಿ ಮುಂಬೈನಂತಹ ಪರ್ಯಾಯ ಸ್ಥಳಗಳನ್ನು ನೋಡಿತ್ತು. ಆದರೆ, ಇದೀಗ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಪುನರಾರಂಭಕ್ಕೆ ಕರ್ನಾಟಕ ಸರ್ಕಾರ ಮತ್ತು ಪೊಲೀಸರು ಅನುಮತಿ ನೀಡಿದ್ದಾರೆ ಎಂದು ವರದಿಯೊಂದು ಹೇಳಿದ್ದರೂ, ಹೊಸ ವರದಿ ಪ್ರಕಾರ ಆರ್‌ಸಿಬಿಯೇ ಎಂ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ಹಿಂಜರಿಯುತ್ತಿದೆ ಎನ್ನಲಾಗಿದೆ.
ದೈನಿಕ್ ಜಾಗರಣ್ ಪ್ರಕಾರ, ಬೆಂಗಳೂರಿನಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವಿಗೀಡಾಗಿ, ಹಲವಾರು ಜನರು ಗಾಯಗೊಂಡ ನಂತರ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನಿನ ಬಗ್ಗೆ ಆರ್‌ಸಿಬಿ ಭಯಭೀತವಾಗಿದೆ ಎಂದು ವರದಿಯಾಗಿದೆ. ಬಿಸಿಸಿಐ ಮೂಲವೊಂದು ಹೇಳುವಂತೆ, ಸ್ಥಳಕ್ಕೆ ಹೋಗುವ ರಸ್ತೆಗಳಲ್ಲಿ ಮತ್ತು ಸುತ್ತಮುತ್ತಲಿನ ಘಟನೆಗಳಿಗೆ ಆ ಸ್ಥಳದಲ್ಲಿ ಆಡುವ ತಂಡವೇ ಜವಾಬ್ದಾರರಾಗಿರುತ್ತದೆ. ಈ ಕಠಿಣ ಕಾನೂನಿನ ಭಯದಿಂದಾಗಿ ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಿಂತಿರುಗಲು ಹಿಂಜರಿಯುತ್ತಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ವಾಹನಗಳಿಗೆ ಗೊತ್ತುಪಡಿಸಿದ ಜಾಗವನ್ನು ಆರ್‌ಸಿಬಿಯ ಡಿಜೆ ಆಕ್ರಮಿಸಿಕೊಂಡಿದೆ ಎಂದು ವರದಿ ಹೇಳುತ್ತದೆ.
'ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ನಂತರ ಕರ್ನಾಟಕ ಸರ್ಕಾರ ಕಾನೂನು ಜಾರಿಗೆ ತರಲು ನಿರ್ಧರಿಸಿತು. ಯಾವುದೇ ಪಂದ್ಯ ನಡೆಯುತ್ತಿದ್ದರೂ, ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿ ಏನಾದರೂ ಸಂಭವಿಸಿದರೂ, ತಂಡವನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಇದೇ ಕಾರಣಕ್ಕೆ ಆರ್‌ಸಿಬಿ ಮಾಲೀಕರು ಭಯಭೀತರಾಗಿದ್ದಾರೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಆರ್‌ಸಿಬಿ ತನ್ನ ಐಪಿಎಲ್ 2026ರ ಐದು ಪಂದ್ಯಗಳನ್ನು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲು ಬಯಸಿದೆ ಎಂದು ವರದಿಯಾಗಿದೆ. ಆದಾಗ್ಯೂ, ಇದು ಇನ್ನೂ ಫಲಪ್ರದವಾಗಿಲ್ಲ. ಏಕೆಂದರೆ, ತಂಡವು ಐಪಿಎಲ್ ನಿಯಮಗಳ ಪ್ರಕಾರ, ಮುಂಬೈ ಇಂಡಿಯನ್ಸ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯಬೇಕಾಗಿದೆ.