ಬೆಂಗಳೂರು: ಕಾಲ್ತುಳಿತ ಪ್ರಕರಣ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಆಡುವಂತೆ ಮಾಡಲು ನಾವು ಹರಸಾಹಸ ಪಡುತ್ತಿದ್ದೇವೆ. ರಾಜ್ಯ ಸರ್ಕಾರ ಸಹ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ನಡೆಸಲು ಅನುಮತಿ ನೀಡಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾತ್ರ ಹಿಂಜರಿಯುತ್ತಿದೆ ಎಂದು ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ರಾಜ್ಯ ಸರ್ಕಾರದ ಸೂಚನೆಯಂತೆ ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಮುಗಿಸಿ ಬಿಸಿಸಿಐ ಹಸ್ತಾಂತರ ಮಾಡುತ್ತೇವೆ. ಇನ್ನು ಆರ್ ಸಿಬಿ ಮ್ಯಾನೇಜ್ಮೆಂಟ್ ಗೆ ತನ್ನ ಎಲ್ಲಾ ಪಂದ್ಯಗಳನ್ನು ಇಲ್ಲಿಯೇ ಆಡಿಸಲು ಮನವಿ ಮಾಡುತ್ತೇವೆ. ಆದರೆ ಐಪಿಎಲ್ ನ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಯಾಕೋ ಇಲ್ಲಿ ಪಂದ್ಯವನ್ನು ಆಡಲು ಹಿಂದೇಟು ಹಾಕುತ್ತಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
IPL ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರೆತಿದೆ. ಇದಕ್ಕಾಗಿ ಕಳೆದ 45 ದಿನಗಳಿಂದ ಸಾಕಷ್ಟು ಪರಿಶ್ರಮ ಪಟ್ಟಿದ್ದೇವೆ. ಸರ್ಕಾರ ರಚನೆ ಮಾಡಿದ್ದ ಸಮಿತಿ ಹೇಳಿದ್ದ ಎಲ್ಲಾ ಷರತ್ತುಗಳನ್ನು ಪಾಲಿಸಿದ್ದೇವೆ ಎಂದರು.
ಆರ್ ಸಿ ಬಿ ಚಾಂಪಿಯನ್ ಆಗಿರುವುದರಿಂದ ಹೋಮ್ ಗ್ರೌಂಡ್ ನಲ್ಲಿ ಉದ್ಘಾಟನಾ ಪಂದ್ಯ ಮತ್ತು ಉದ್ಗಾಟನಾ ಸಮಾರಂಭ ನಡೆಯಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದ ವೆಂಕಟೇಶ್ ಪ್ರಸಾದ್, ಇನ್ನು 15 ದಿನಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಸುವ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು.