ಮುಂಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದಲ್ಲಿ ಆಡುವುದಿಲ್ಲ ಎಂದು ಹಠ ಹಿಡಿದಿದ್ದ ಬಾಂಗ್ಲಾದೇಶಕ್ಕೆ ಐಸಿಸಿ ಚಾಟಿ ಬೀಸಿದ ಬೆನ್ನಲ್ಲೇ ಬಿಸಿಬಿ ಇದೀಗ ತನ್ನ ಪಾಲಿನ 240 ಕೋಟಿ ರೂ ಆದಾಯ ಉಳಿಸಿಕೊಳ್ಳಲು DRC ಹಸ್ತಕ್ಷೇಪಕ್ಕೆ ಮನವಿ ಮಾಡಿದೆ.
ಹೌದು.. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಆಡದೇ ಇದ್ದರೆ ಆಗುವ ಸಮಸ್ಯೆಗಳನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮನವರಿಕೆ ಮಾಡಿಕೊಂಡಿದೆ.
ಹೀಗಾಗಿ ಟೂರ್ನಿಯಲ್ಲಿ ಆಡಲು ಪ್ರಯತ್ನಿಸುತ್ತಿರುವ ಬಾಂಗ್ಲಾದೇಶ ತನ್ನ ಕೊನೆಯ ಪ್ರಯತ್ನವಾಗಿ ಐಸಿಸಿಗೆ ಮತ್ತೊಂದು ಪತ್ರವನ್ನು ಬರೆದು ಕಳುಹಿಸಿದ್ದು, ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಕೊನೆಯ ಪ್ರಯತ್ನವಾಗಿ ಬಿಸಿಬಿ ಐಸಿಸಿಯ ಸ್ವತಂತ್ರ ವಿವಾದ ಪರಿಹಾರ ಸಮಿತಿ (ಡಿಆರ್‌ಸಿ) ಹಸ್ತಕ್ಷೇಪ ಮಾಡುವಂತೆ ಕೋರಿದೆ.
ಭಾರತ ಪ್ರವಾಸ ಬೆಳೆಸಲು ಬಾಂಗ್ಲಾದೇಶ ಹಿಂದೇಟು ಹಾಕಿದ ಹಿನ್ನೆಲೆ ಬಿಸಿಬಿ ಅಳೆದು ತೂಗಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆಯೂ ಬಿಸಿಬಿ ತಾನಾಡುವ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿತ್ತು.
ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಪ್ರವಾಸ ಬೆಳೆಸದಿರಲು ಬಿಸಿಬಿ ತಿಳಿಸಿತ್ತು. ಈಗ ಬರುತ್ತಿರುವ ಮಾಹಿತಿ ಪ್ರಕಾರ ಬಿಸಿಬಿ ಟೂರ್ನಿಯಿಂದ ಹಿಂದೆ ಸರಿಯುವ ಬದಲು ಐಸಿಸಿಯ ಕಾನೂನು ಚೌಕಟ್ಟಿನ ಕದ ತಟ್ಟಿದೆ.
ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಮ್ ಹೇಳಿಕೆ
ಐಸಿಸಿ ಈ ಹಿಂದೆ ಸ್ಥಿತಿಸ್ಥಾಪಕತೆಯನ್ನು ಪ್ರದರ್ಶಿಸಿತ್ತು. ಆದರೆ ಅದೇ ಆಯ್ಕೆಯನ್ನು ಬಾಂಗ್ಲಾದೇಶಕ್ಕೆ ವಿಸ್ತರಿಸಲು ನಿರಾಕರಿಸಿದೆ ಎಂದು ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಮ್ ಹೇಳಿದರು. ಬಾಂಗ್ಲಾದೇಶದ ಕ್ರಿಕೆಟ್ ಸಲಹೆಗಾರ ಆಸೀಫ್ ನಝ್ರುಲ್, ಬಿಸಿಬಿ ಅಧಿಕಾರಿಗಳು ಹಾಗೂ ರಾಷ್ಟ್ರೀಯ ತಂಡದ ಆಟಗಾರರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಇಸ್ಲಾಮ್ ಈ ಹೇಳಿಕೆ ನೀಡಿದ್ದಾರೆ.
'ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸದಿರಲು ಬಿಸಿಬಿ ನಿರ್ಧರಿಸಿದೆ. ಕಳೆದ ಫೆಬ್ರುವರಿಯಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಒಂದು ತಂಡ ಮತ್ತೊಂದು ದೇಶಕ್ಕೆ ಪ್ರಯಾಣಿಸಲು ನಿರಾಕರಿಸಿದಾಗ, ಐಸಿಸಿ ಆ ತಂಡಕ್ಕಾಗಿ ತಟಸ್ಥ ತಾಣವನ್ನು ಆಯೋಜಿಸಿತ್ತು.
ಆ ತಂಡ ತನ್ನ ಎಲ್ಲ ಪಂದ್ಯಗಳನ್ನು ಒಂದೇ ತಟಸ್ಥ ಸ್ಥಳದಲ್ಲಿ ಆಡಿದ್ದು, ಒಂದೇ ಮೈದಾನದಲ್ಲಿ ಪಂದ್ಯಗಳನ್ನು ನಡೆಸಿ, ಒಂದೇ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿತ್ತು. ಇದು ಆ ತಂಡಕ್ಕೆ ನೀಡಲಾದ ವಿಶೇಷ ಸೌಲಭ್ಯ" ಎಂದು ಇಸ್ಲಾಮ್ ಹೇಳಿದ್ದಾರೆ.
DRC ಸಮಿತಿ
ಐಸಿಸಿ ವಿವಾದಗಳ ಪರಿಹಾರಕ್ಕಾಗಿ ಸಮಿತಿಯೊಂದನ್ನು ನೇಮಿಸಿರುತ್ತದೆ. ಈ ಸಮಿತಿಯಲ್ಲಿ ಕಾನೂನು ತಜ್ಞರು ಸಹ ಸೇರಿರುತ್ತಾರೆ. ಇದು ಐಸಿಸಿ ನಿರ್ಧಾರಗಳು, ನಿಯಮಗಳಿಗೆ ಸಂಬಂಧಿಸಿದಂತೆ ವಿವಾದಗಳನ್ನು ನಿವಾರಿಸುವ ಕಾರ್ಯವನ್ನು ಮಾಡುತ್ತದೆ. ಈ ಸಮಿತಿ ಲಂಡನ್‌ನಲ್ಲಿ ಇದೆ. ಈ ಸಮಿತಿಯು ಐಸಿಸಿಯ ಮೇಲ್ಮನವಿ ನ್ಯಾಯಾಲಯವಾಗಿ ಕಾರ್ಯ ಮಾಡುವುದಿಲ್ಲ.
ಬದಲಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಐಸಿಸಿ ಸರಿಯಾದ ರೀತಿಯಲ್ಲಿ ತನ್ನ ಪಾತ್ರವನ್ನು ವಹಿಸಿದೆಯಾ ಎಂದು ಪರಾಮರ್ಶಿಸುತ್ತದೆ. ಇದರ ನಿರ್ಧಾರಗಳು ಅಂತಿಮ ಮತ್ತು ಬದ್ಧವಾಗಿರುತ್ತವೆ. ಐಸಿಸಿ ಯಾವುದೇ ಯೋಚನೆ ಮಾಡದೆ ತನ್ನ ನಿರ್ಧಾರವನ್ನು ಪ್ರಕಟಿಸಿದೆ ಎಂದು ಬಿಸಿಬಿ ಪ್ರಶ್ನೆ ಎತ್ತಿದೆ. ಈಗಾಗಲೇ ಬಿಸಿಬಿ ತಮ್ಮೊಂದಿಗೆ ಐಸಿಸಿ ಅನ್ಯಾಯ ಮಾಡುತ್ತಿದೆ ಎಂದು ದೂರಿದೆ.
ಆದಾಯ ನಷ್ಟ ತಪ್ಪಿಸಲು ಹರಸಾಹಸ
ಒಂದು ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹೊರನಡೆದರೆ 240 ಕೋಟಿ ನಷ್ಟವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೂ ಸಹ ಬಿಸಿಬಿ ತಾನು ಭಾರತಕ್ಕೆ ಪ್ರವಾಸ ಬೆಳೆಸುವುದಿಲ್ಲ ಎಂಬ ನಿರ್ಧಾರಕ್ಕೆ ಬದ್ಧವಾಗಿದೆ. ಬಾಂಗ್ಲಾದೇಶ ಪ್ರವಾಸ ಬೆಳೆಸದಂತೆ ಪಾಕಿಸ್ತಾನ ಸಹ ಬೆಂಬಲಿಸುತ್ತಿದೆ. ಆದರೆ ಪಾಕ್ ಟಿ20 ವಿಶ್ವಕಪ್‌ನಲ್ಲಿ ಆಡಲು ಗ್ರೀನ್ ಸಿಗ್ನಲ್ ನೀಡಿದೆ. ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಆಡುವುದಿಲ್ಲ ಎಂದು ಈ ಮೊದಲೇ ಸ್ಪಷ್ಟ ಪಡಿಸಿತ್ತು.
ಬಾಂಗ್ಲಾದೇಶ ಬೇಡಿಕೆ
ಅಲ್ಲದೆ ಇತ್ತೀಚಿಗೆ ನಡೆದ ಐಸಿಸಿ ಸಭೆಯಲ್ಲಿ ಸ್ಥಳ ಬದಲಾವಣೆಯ ಬೇಡಿಕೆಯನ್ನು ಇಟ್ಟಿತ್ತು. ಅಲ್ಲದೆ ತಮ್ಮ ತಂಡದ ಗುಂಪುಗಳ ಬದಲಾವಣೆಗಳನ್ನು ಮಾಡುವಂತೆ ಮನವಿ ಮಾಡಿತ್ತು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಐಸಿಸಿ ವೇಳಾ ಪಟ್ಟಿಯಲ್ಲಿ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿತ್ತು. ಐಸಿಸಿ ಈ ನಿರ್ಧಾರವನ್ನೇ ಪ್ರಶ್ನಿಸಿ ಡಿಆರ್‌ಸಿಗೆ ಮನವಿಯನ್ನು ಮಾಡಿದೆ. ಬಾಂಗ್ಲಾದೇಶ ತನ್ನ ನಿಲುವಿನ ಬಗ್ಗೆ ಮತ್ತೊಮ್ಮೆ ವಿಮರ್ಷೆ ನಡೆಸಿದಂತೆ ಕಾಣುತ್ತಿದೆ. ಡಿಆರ್‌ಸಿ ಬಿಸಿಬಿ ಪರವಾಗಿ ತೀರ್ಪು ನೀಡದಿದ್ದರೆ ಮತ್ತು ತಂಡವು ಪಂದ್ಯಾವಳಿಯಿಂದ ಹಿಂದೆ ಸರಿದರೆ, ಸ್ಕಾಟ್ಲೆಂಡ್ ಅನ್ನು ಅವರ ಸ್ಥಾನದಲ್ಲಿ ಸೇರಿಸಲಾಗುತ್ತದೆ.