ಸಿಸಿಎಲ್ 12ನೇ ಟೂರ್ನಿ ಕುತೂಹಲ ಮೂಡಿಸಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಆರ್ಭಟ ಜೋರಾಗಿದ್ದು ಲೀಗ್ ಹಂತದ 3 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ನಿಗದಿತ ಓವರ್ ನಲ್ಲಿ ಕರ್ನಾಟಕ 202 ರನ್ ಪೇರಿಸಿದ್ದು ಭೋಜ್‌ಪುರಿ ದಬಾಂಗ್ಸ್ ಗೆ 203 ರನ್ ಗಳ ಟಾರ್ಗೆಟ್ ನೀಡಿತ್ತು.
ಕೋಯಂಬತ್ತೂರಿನ ಶ್ರೀ ರಾಮಕೃಷ್ಣ ಕಲಾ ಮತ್ತು ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 203 ರನ್ ಗುರಿ ಬೆನ್ನಟ್ಟಿದ ಭೋಜ್‌ಪುರಿ ದಬಾಂಗ್ಸ್ 184 ರನ್ ಗಳಿಗೆ ಆಲೌಟ್ ಆಗಿದ್ದು 18 ರನ್ ಗಳಿಂದ ಕರ್ನಾಟಕ ಬುಲ್ಡೋಜರ್ಸ್ಗೆ ಶರಣಾಯಿತು.
ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ 3 ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು ಸ್ಟ್ರೈಕ್ ರೇಟ್ ನಿಂದಾಗಿ ಮೊದಲ ಸ್ಥಾನದಲ್ಲಿದೆ. ಬೆಂಗಾಲ್ ಟೈಗರ್ಸ್ ಸಹ ಆಡಿದ 3 ಪಂದ್ಯಗಳನ್ನು ಗೆದ್ದು 6 ಅಂಕ ಗಿಟ್ಟಿಸಿಕೊಂಡು 2ನೇ ಸ್ಥಾನದಲ್ಲಿದೆ. 3 ಪಂದ್ಯದಲ್ಲಿ 2 ಪಂದ್ಯ ಗೆದ್ದು ಕೇರಳ ಸ್ಟೈಕರ್ಸ್ 3ನೇ ಸ್ಥಾನ ಪಡೆದಿದ್ದು 3 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದು ಒಳ್ಳೆಯ ನೆಟ್ ರನ್‌ರೇಟ್ ಕಾರಣಕ್ಕೆ ಪಂಜಾಬ್ ದೆ ಶೇರ್ 4ನೇ ಸ್ಥಾನದಲ್ಲಿದೆ. ಈ 4 ತಂಡಗಳು ಸೆಮಿಫೈನಲ್ ಹಂತ ಏರುವುದು ಬಹುತೇಕ ಖಚಿತವಾಗಿದೆ.
ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಈವರೆಗೆ 2 ಬಾರಿ ಟ್ರೋಫಿ ಗೆದ್ದಿದೆ. ಕಳೆದ ಸೀಸನ್‌ನಲ್ಲಿ ಪ್ರಬಲ ತಂಡ ಎಂದೇ ಗುರ್ತಿಸಿಕೊಂಡಿದ್ದ ಸುದೀಪ್ ಪಡೆ ನಿರಾಸೆ ಅನುಭವಿಸಿತ್ತು. ಆದರೆ ಈ ಬಾರಿ 3 ಪಂದ್ಯ ಗೆದ್ದು ಬೀಗಿದೆ. ತೆಲುಗು ವಾರಿಯರ್ಸ್ ಹಾಗೂ ಪಂಜಾಬ್ ದೆ ಶೇರ್ ರೀತಿಯ ಘಟಾನುಘಟಿ ತಂಡಗಳನ್ನು ಸೋಲಿಸಿದೆ.