ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಫೆಬ್ರುವರಿ 2 ರಂದು ಕೊಲಂಬೊಗೆ ಪ್ರಯಾಣ ಬೆಳಸಲಿದ್ದು, ಫೆಬ್ರುವರಿ 15 ರಂದು ಭಾರತ ವಿರುದ್ಧದ ಪಂದ್ಯ ಅಥವಾ ಪಂದ್ಯಾವಳಿಯನ್ನು ಬಹಿಷ್ಕರಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಮಂಡಳಿಯ ಆಪ್ತ ಮೂಲಗಳು ಗುರುವಾರ ತಿಳಿಸಿವೆ.
'ಫೆಬ್ರುವರಿ 2 ರಂದು ಬೆಳಿಗ್ಗೆ ಕೊಲಂಬೊಗೆ ತೆರಳಲು ವಿಶ್ವಕಪ್ ತಂಡಕ್ಕೆ ಪಿಸಿಬಿ ಈಗಾಗಲೇ ಪ್ರಯಾಣ ವ್ಯವಸ್ಥೆ ಮಾಡಿದೆ' ಎಂದು ಅವರು ಹೇಳಿದರು.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಆಟಗಾರರ ಭದ್ರತೆಯನ್ನು ಮುಂದಿಟ್ಟು ತನ್ನೆಲ್ಲ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸಬೇಕು ಎಂದು ಇಟ್ಟಿದ್ದ ಬೇಡಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ಸಂಪೂರ್ಣ ಬೆಂಬಲ ಸೂಚಿಸಿದೆ. ಆದರೆ, ಐಸಿಸಿಯಲ್ಲಿ ತನ್ನ ಸ್ಥಾನಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಪಿಸಿಬಿ ಬೇರೆ ಯಾವುದೇ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಬಿಸಿಸಿಐ, ಪಿಸಿಬಿ ಮತ್ತು ಐಸಿಸಿ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದು, 2027ರವರೆಗೆ ಐಸಿಸಿ ಈವೆಂಟ್‌ಗಳಲ್ಲಿ ಎಲ್ಲ ಭಾರತ-ಪಾಕಿಸ್ತಾನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಾಗುತ್ತದೆ.
'ಪಾಕಿಸ್ತಾನದ ವಿಶ್ವಕಪ್ ವೇಳಾಪಟ್ಟಿ ಶ್ರೀಲಂಕಾದಲ್ಲಿದೆ. ಅವರು ಅರ್ಹತೆ ಪಡೆದರೆ ಫೈನಲ್ ಕೂಡ ಸೇರಿದೆ. ಹೀಗಿರುವಾಗ ಅವರು ಯಾವ ಆಧಾರದ ಮೇಲೆ ಪಂದ್ಯಾವಳಿಯನ್ನು ಅಥವಾ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬಹುದು?' ಎಂದು ಅವರು ಕೇಳಿದರು.
ಪಿಸಿಬಿ ಶುಕ್ರವಾರ ಅವರ ಭಾಗವಹಿಸುವಿಕೆಯನ್ನು ದೃಢೀಕರಿಸುವ ನಿರೀಕ್ಷೆಯಿದೆ.
ಪಾಕಿಸ್ತಾನ ಪಂದ್ಯಾವಳಿಯಿಂದ ಹಿಂದೆ ಸರಿಯಬಹುದು ಅಥವಾ ಭಾರತದೊಂದಿಗೆ ಆಡಲು ನಿರಾಕರಿಸಬಹುದು ಎಂಬ ಊಹಾಪೋಹಗಳು ಮಾಧ್ಯಮಗಳಲ್ಲಿ ಕೇಳಿಬರುತ್ತಿದ್ದು, ಅಂತಹ ವರದಿಗಳು ವದಂತಿಗಳೆಂದು ಮೂಲಗಳು ತಳ್ಳಿಹಾಕಿವೆ.
'ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾದಾಗ, ಪರಿಗಣನೆಯಲ್ಲಿರುವ ಎಲ್ಲ ಆಯ್ಕೆಗಳು ಪಾಕಿಸ್ತಾನ ಕ್ರಿಕೆಟ್‌ಗೆ ಸ್ಥಿರ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬೇಕು. ಐಸಿಸಿ ಮತ್ತು ಸದಸ್ಯ ಮಂಡಳಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ' ಎಂದು ಒಳಗಿನವರು ತಿಳಿಸಿದ್ದಾರೆ.
ಈ ಊಹಾಪೋಹಕ್ಕೆ ತರ್ಕವಿಲ್ಲ. ಪಿಸಿಬಿ ಯಾವ ಆಧಾರದ ಮೇಲೆ ವಿಶ್ವಕಪ್‌ನಿಂದ ದೂರ ಉಳಿಯಬಹುದು ಅಥವಾ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬಹುದು ಎಂಬುದನ್ನು ವಿವರಿಸಲು ವಿಫಲವಾಗಿದೆ. ಭಾರತ ಸರ್ಕಾರವು ತನ್ನ ತಂಡವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದೆ. ಆದರೆ, ಏಷ್ಯಾ ಕಪ್ ಮಟ್ಟದ ಈವೆಂಟ್‌ಗಳಲ್ಲಿ ಅಥವಾ ಐಸಿಸಿ ಈವೆಂಟ್‌ಗಳಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ತಟಸ್ಥ ಸ್ಥಳಗಳಲ್ಲಿ ಆಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ' ಎಂದು ಅವರು ಹೇಳಿದರು.