ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಐದು ಟಿ20 ಪಂದ್ಯಗಳನ್ನಾಡಲು ಸಜ್ಜಾಗುತ್ತಿದ್ದಂತೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬಗ್ಗೆ ಗುಸುಗುಸು ಹೆಚ್ಚುತ್ತಲೇ ಇದೆ.
ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿಗೆ ಭಾರತದ ತಂಡದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ಆಡುವ ಹನ್ನೊಂದು ಆಟಗಾರರಲ್ಲಿ ಸ್ಥಾನ ಪಡೆಯುವಲ್ಲಿ ವೈಭವ್ ವಿಫಲರಾಗಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ಸರಣಿ ಆರಂಭವಾಗುತ್ತಿದ್ದಂತೆ, ಈ ಬಾರಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ.
ಇನ್ನು ಬಗ್ಗೆ ಮಾತನಾಡಿರುವ 1983 ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಅವರು, ಹದಿಹರೆಯದ ಈ ಆಟಗಾರ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಉತ್ತಮ ಆಟಗಾರ. ಆದರೆ ಆತನಿಗೆ ಜಾಸ್ತಿ ಹೈಪ್ ಕೊಡಬೇಡಿ. ಹೊಗಳಿ ಹೊಗಳಿ ತಲೆಗೆ ಹತ್ತಿಸಬೇಡಿ. ಯುವ ಆಟಗಾರನನ್ನು ಇಷ್ಟು ಬೇಗ ಅತಿಯಾಗಿ ಹೊಗಳಬೇಡಿ ಎಂದು ಮಾಜಿ ಟೀಮ್ ಇಂಡಿಯಾ ನಾಯಕ ಕಪಿಲ್ ದೇವ್ ಎಚ್ಚರಿಸಿದ್ದಾರೆ.
"ನಾನು ವೈಭವ್ ಆಡುವುದನ್ನು ಹೆಚ್ಚು ನೋಡಿಲ್ಲ. ಅವರು ನಿಸ್ಸಂದೇಹವಾಗಿ ದೊಡ್ಡ ಪ್ರತಿಭೆ. ಆದರೆ ನಾವು ಅವರ ಬಗ್ಗೆ ತುಂಬಾ ದೊಡ್ಡದಾಗಿ ಮಾತನಾಡುತ್ತಿದ್ದೇವೆ ಎಂದು ಭಾವಿಸುತ್ತೇನೆ. ಈ ಸಮಯದಲ್ಲಿ, ಅವರಿಗೆ ಸ್ವಲ್ಪ ಸಮಯ ನೀಡಿ. ಆತನಿಗೆ ಹೆಚ್ಚು ಪ್ರಚಾರ ನೀಡಬೇಡಿ. ಆತ ಚಿಕ್ಕವನಾಗಿದ್ದು, ಎಲ್ಲವನ್ನೂ ಅರ್ಥಮಾಡಿಕೊಳ್ಳುವ ವಯಸ್ಸು ಇದಲ್ಲ " ಎಂದು ಕಪಿಲ್ ದೇವ್ ಅವರು ಸ್ಪೋರ್ಟ್ಸ್ ಟಕ್‌ಗೆ ತಿಳಿಸಿದ್ದಾರೆ.
ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿಯನ್ನು ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರಿಗೆ ಹೋಲಿಸುತ್ತಿರುವುದರ ಬಗ್ಗೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈಭವ್ ಇನ್ನು ಕೇವಲ ಹುಡುಗ. ಕರಿಯರ್‌ನ ಆರಂಭದಲ್ಲೇ ಮಾಧ್ಯಮಗಳು ಮತ್ತು ಅಭಿಮಾನಿಗಳು ಆತನನ್ನು ಅತಿಯಾಗಿ ಹೊಗಳಿ, ಆಕಾಶಕ್ಕೆ ಏರಿಸುವುದನ್ನು ನಿಲ್ಲಿಸಬೇಕು. ಇಂತಹ ಅತಿಯಾದ ಹೈಪ್ ಆಟಗಾರನ ಮೇಲೆ ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ದಶಕಗಳ ಕಾಲ ಸಾಧನೆ ಮಾಡಿ ಆ ಸ್ಥಾನಕ್ಕೆ ತಲುಪಿದ್ದಾರೆ. ಈಗ ತಾನೆ ಕೃಷಿ ಆರಂಭಿಸುತ್ತಿರುವ ಯುವಕನನ್ನು ಆ ದಿಗ್ಗಜರಿಗೆ ಹೋಲಿಸುವುದು ಸರಿಯಲ್ಲ. ಆತನಿಗೆ ತನ್ನದೇ ಆದ ರೀತಿಯಲ್ಲಿ ಬೆಳೆಯಲು ಬಿಡಿ ಎಂದು ಸಲಹೆ ನೀಡಿದ್ದಾರೆ.