ಭಾರತೀಯ ಕ್ರಿಕೆಟ್‌ನ ಅತ್ಯಂತ ಶಾಂತ, ಸಂಯಮ ಹಾಗೂ ನಂಬಿಕಸ್ಥ ಬ್ಯಾಟರ್‌ಗಳಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನ ಒಂದು ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ರಹಾನೆ, ಸಾಮಾನ್ಯ ಹಿನ್ನೆಲೆಯಿಂದ ಬಂದು ಜಗತ್ತಿನ ಬೃಹತ್ ವೇದಿಕೆಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ಬೆಳೆದಿದ್ದು ನನ್ನ ಪಾಲಿಗೆ ಸಿಕ್ಕ ಅತ್ಯಂತ ದೊಡ್ಡ ಸೌಭಾಗ್ಯ. ನನ್ನನ್ನು ಇಂದು ಈ ಮಟ್ಟದ ವ್ಯಕ್ತಿಯನ್ನಾಗಿ ರೂಪಿಸಲು ಮೌಲ್ಯಯುತ ಕೊಡುಗೆ ನೀಡಿದ ನನ್ನ ಎಲ್ಲಾ ತರಬೇತುದಾರರು, ಮಾರ್ಗದರ್ಶಕರು, ಸಹ ಆಟಗಾರರು ಮತ್ತು ಪೋಷಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
'ಕ್ಯಾಪ್ 278 ವಿದಾಯ ಹೇಳುತ್ತಿದೆ. ಇಷ್ಟು ವರ್ಷಗಳ ಕಾಲ ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಸದಾ ಕೃತಜ್ಞನಾಗಿರುತ್ತೇನೆ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮುಂಬೈ ಮೂಲದ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
38 ವರ್ಷದ ರಹಾನೆ, ಸಾಕಷ್ಟು ಚಿಂತನೆ ಮತ್ತು ಆತ್ಮಾವಲೋಕನದ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಮುಂದಿನ ಹಾದಿಯತ್ತ ಸಾಗಲು ಇದೇ ಸೂಕ್ತ ಸಮಯ ಎಂದು ನಾನು ನಂಬಿದ್ದೇನೆ" ಎಂದು ಅವರು ಹೇಳಿದ್ದಾರೆ.
ಭಾರತದ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಡುವ ರಹಾನೆ, ಹಲವು ಸ್ಮರಣೀಯ ಟೆಸ್ಟ್ ಪಂದ್ಯಗಳು ಹಾಗೂ ಸರಣಿ ಗೆಲುವುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅದರಲ್ಲೂ 2020–21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತವನ್ನು ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನತ್ತ ಮುನ್ನಡೆಸಿದ ನಾಯಕತ್ವವು ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ. ಆ ಸರಣಿಯಲ್ಲಿ ಅವರ ಶಾಂತ ಸ್ವಭಾವದ ನಾಯಕತ್ವ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ರಹಾನೆ ದೇಶೀಯ ಕ್ರಿಕೆಟ್ ಹಾಗೂ ಫ್ರಾಂಚೈಸ್ ಲೀಗ್ ಗಳಲ್ಲಿ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ. ಇದರೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಪರ ಸೇವೆ ಸಲ್ಲಿಸಿದ ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಧ್ಯಾಯ ಮುಕ್ತಾಯಗೊಂಡಿದ್ದು, ಭಾರತದ ಅತ್ಯಂತ ಗೌರವಾನ್ವಿತ ಆಧುನಿಕ ಕ್ರಿಕೆಟಿಗರಲ್ಲಿ ಒಬ್ಬರಾಗಿ ಅವರು ತಮ್ಮ ಛಾಪು ಮೂಡಿಸಿದ್ದಾರೆ.
ಭಾರತ ಪರ 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನಾಡಿ 8,000ಕ್ಕೂ ಅಧಿಕ ರನ್ ಬಾರಿಸಿರುವ ಅಜಿಂಕ್ಯ ರಹಾನೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲ್ಯದ ಮೂಲಕ ಗಮನ ಸೆಳೆದಿದ್ದರು. ಅಜಿಂಕ್ಯ ರಹಾನೆ 2023ರಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಪಂದ್ಯವನ್ನಾಡಿದ್ದರು. ಇನ್ನು ಏಕದಿನ ಮಾದರಿಯಲ್ಲಿ ರಹಾನೆ 2018ರಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ವೆಸ್ಟ್ ಇಂಡೀಸ್ ವಿರುದ್ದ 2016ರಲ್ಲಿ ಕೊನೆಯ ಬಾರಿಗೆ ಭಾರತ ಟಿ20 ತಂಡದಲ್ಲಿ ಅಜಿಂಕ್ಯ ರಹಾನೆ ಸ್ಥಾನ ಪಡೆದಿದ್ದರು.