ಕನ್ನಡತಿ ಶ್ರೇಯಾಂಕ ಪಾಟಿಲ್ 
ಕ್ರಿಕೆಟ್

'14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ, ಖಿನ್ನತೆಗೆ ಒಳಗಾಗಿದ್ದೆ.. Cricket ಅನ್ನೇ ತೊರೆಯಬೇಕೆಂದಿದ್ದೆ': ಕನ್ನಡತಿ Shreyanka Patil ಆಘಾತಕಾರಿ ಹೇಳಿಕೆ

ದೀರ್ಘಕಾಲದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಳೆ ಖಿನ್ನತೆಗೆ (ಡಿಪ್ರೆಶನ್) ಒಳಗಾಗಿದ್ದೆ ಮತ್ತು ಕ್ರಿಕೆಟ್ ತೊರೆಯುವ ಬಗ್ಗೆ ಕೂಡ ಯೋಚಿಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ಬರ್ಮಿಂಗ್ ಹ್ಯಾಮ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದು ಸುದ್ದಿಗೆ ಗ್ರಾಸವಾಗಿದ್ದ ಭಾರತ ತಂಡದ ಸ್ಟಾರ್ ಆಟಗಾರ್ತಿ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟಿಲ್ ಒಂದು ಸಮಯದಲ್ಲಿ ಕ್ರಿಕೆಟ್ ಅನ್ನೇ ತೊರೆಯಲು ಮುಂದಾಗಿದ್ದ ಆಘಾತಕಾರಿ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಭಾನುವಾರ ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತದ 64 ರನ್‌ಗಳ ಭರ್ಜರಿ ಗೆಲುವಿನಲ್ಲಿ ಮಿತವ್ಯಯದ ಬೌಲಿಂಗ್ ಪ್ರದರ್ಶನ ನೀಡಿದ್ದ ಶ್ರೇಯಾಂಕ, ದೀರ್ಘಕಾಲದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಳೆ ಖಿನ್ನತೆಗೆ (ಡಿಪ್ರೆಶನ್) ಒಳಗಾಗಿದ್ದೆ ಮತ್ತು ಕ್ರಿಕೆಟ್ ತೊರೆಯುವ ಬಗ್ಗೆ ಕೂಡ ಯೋಚಿಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ಅಲ್ಲದೆ ಆ ಕಠಿಣ ಅವಧಿಯನ್ನು ದಾಟಲು ಕುಟುಂಬ ಮತ್ತು ಆಪ್ತರ ಬೆಂಬಲವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ

ಜುಲೈ 2024ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಬೆರಳು ಮುರಿತದಿಂದಾಗಿ ಶ್ರೇಯಾಂಕ ಸುಮಾರು 14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ನಂತರ ಎರಡೂ ಕಾಲುಗಳಲ್ಲಿ ಮೂಳೆ ಭಾಗದ ಗಾಯ ಹಾಗೂ ಎಡಗೈ ಹೆಬ್ಬೆರಳಿನ ಮುರಿತ ಸೇರಿದಂತೆ ಹಲವು ಸಮಸ್ಯೆಗಳು ಎದುರಾದವು. ಈ ವರ್ಷದ ಆರಂಭದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಆರ್ ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಪರ ಕಣಕ್ಕಿಳಿಯುವ ಮೂಲಕ ಅವರು ಮತ್ತೆ ಕ್ರಿಕೆಟ್‌ಗೆ ಮರಳಿದರು.

ಕ್ರಿಕೆಟ್ ಅನ್ನೇ ತೊರೆಯುವ ಯೋಚನೆ ಬಂದಿತ್ತು

ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೇಯಾಂಕ, "ನಾನು ಖಿನ್ನತೆಗೆ ಒಳಗಾಗಿರಲಿಲ್ಲ ಅಥವಾ ಕ್ರಿಕೆಟ್ ಬಿಡುವ ಬಗ್ಗೆ ಯೋಚಿಸಿರಲಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ಗಾಯದ ಆರಂಭಿಕ ಹಂತದಲ್ಲಿ ನಾನು ನಿಜವಾಗಿಯೂ ಹಾಗೆ ಭಾವಿಸಿದ್ದೆ. ಆದರೆ ನನ್ನೊಳಗೆ ಒಂದು ಧ್ವನಿ ಇತ್ತು.

ಏನೇ ಆಗಲಿ, ನಾನು ಈ ಕ್ರೀಡೆಯನ್ನು ಪ್ರೀತಿಸುತ್ತೇನೆ. ನಾನು ಇಲ್ಲಿ ಇರುವುದೇ ಕ್ರಿಕೆಟ್ ಮೇಲಿನ ಪ್ರೀತಿಯಿಂದ. ನಾನು ತುಂಬಾ ಇಷ್ಟಪಡುವ ವಿಷಯವನ್ನು ಬಿಟ್ಟುಬಿಡಲು ಸಾಧ್ಯವಾಗಲಿಲ್ಲ. ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ನನ್ನ ತಂದೆ ನಿರಂತರವಾಗಿ ನನ್ನೊಂದಿಗೆ ಮಾತನಾಡುತ್ತಿದ್ದರು. ನನ್ನ ಕುಟುಂಬ ಸಂಪೂರ್ಣ ಬೆಂಬಲ ನೀಡಿತು ಎಂದು ಹೇಳಿದ್ದಾರೆ.

ಅಲ್ಲದೆ ನನ್ನ ಸುತ್ತಲೂ ಒಳ್ಳೆಯ ಜನರಿದ್ದರು. ಆ ಬಲವಾದ ಬೆಂಬಲ ವ್ಯವಸ್ಥೆಯೇ ನನ್ನನ್ನು ಮುಂದೆ ಸಾಗುವಂತೆ ಮಾಡಿತು. ಈಗ ಮತ್ತೆ ಮೈದಾನಕ್ಕೆ ಮರಳಿರುವುದನ್ನು ನಾನು ತುಂಬಾ ಆನಂದಿಸುತ್ತಿದ್ದೇನೆ. ಆ ಭಾವನೆಯನ್ನು ಎಂದಿಗೂ ಕಳೆದುಕೊಳ್ಳಲು ಬಯಸುವುದಿಲ್ಲ ಎಂದರು.

ಶ್ರೇಯಾಂಕ ಪಾಟೀಲ್ ಅವರ ಈ ಬಹಿರಂಗ ಹೇಳಿಕೆ, ಗಾಯಗಳಿಂದಾಗಿ ಕಠಿಣ ಸಮಯವನ್ನು ಎದುರಿಸುತ್ತಿರುವ ಕ್ರೀಡಾಪಟುಗಳ ಮಾನಸಿಕ ಆರೋಗ್ಯದ ಮಹತ್ವವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.

ಪಾಕಿಸ್ತಾನ ವಿರುದ್ಧ ಮಿಂಚಿನ ಪ್ರದರ್ಶನ

ಮಹಿಳಾ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೇಯಾಂಕ ಪಾಟಿಲ್ ಮೂರು ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಭಾರತ ತಂಡ ತಾನು ನೀಡಿದ್ದ 170 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ರಕ್ಷಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು.

ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುವುದು ನನಗೆ ಇಷ್ಟ

ಪವರ್‌ಪ್ಲೇ ಅವಧಿಯಲ್ಲಿ ಬೌಲಿಂಗ್ ಮಾಡುವ ಬಗ್ಗೆ ಮಾತನಾಡಿದ ಶ್ರೇಯಾಂಕಾ, "ನಾನು ಯಾವಾಗಲೂ ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುವುದನ್ನು ಇಷ್ಟಪಡುತ್ತೇನೆ. ಅದು ರಾಜ್ಯ ತಂಡವಾಗಿರಲಿ ಅಥವಾ ಭಾರತ ತಂಡವಾಗಿರಲಿ. ಒತ್ತಡದ ಸಂದರ್ಭಗಳಲ್ಲಿ ಬೌಲಿಂಗ್ ಮಾಡುವುದು ನನಗೆ ತುಂಬಾ ಇಷ್ಟ.

ಹಿಂದೆಯೂ ನಾನು ಅದನ್ನು ಯಶಸ್ವಿಯಾಗಿ ಮಾಡಿದ್ದೇನೆ. ಎಡಗೈ ಬ್ಯಾಟರ್‌ಗೆ ಬೌಲಿಂಗ್ ಮಾಡುವುದು ಮೋಜಿನ ಅನುಭವವಾಗಿತ್ತು. ನಾವು ಕೆಲವು ಅವಕಾಶಗಳನ್ನು ಕೈಚೆಲ್ಲಿದ್ದೇವೆ. ಆದರೆ ದೀಪ್ತಿ ಶರ್ಮಾ ಅವರ ಐದು ವಿಕೆಟ್ ಸಾಧನೆ ಅದನ್ನು ಸರಿದೂಗಿಸಿತು. ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಿರುವುದು ನಮಗೆ ಅತ್ಯುತ್ತಮ ವಿಷಯ' ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸವಾಲು

ಭಾರತ ತಂಡ ಹಾಲಿ ಮಹಿಳಾ ವಿಶ್ವಕಪ್ ಚಾಂಪಿಯನ್ ಆಗಿದ್ದರೂ ಆತ್ಮತೃಪ್ತಿಗೆ ಒಳಗಾಗಬಾರದು ಎಂದು ಶ್ರೇಯಾಂಕ ಎಚ್ಚರಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕೂಡ ಅತ್ಯುತ್ತಮ ತಂಡಗಳು ಎಂಬುದು ನಮಗೆ ಗೊತ್ತಿದೆ. ಇದು ವಿಶ್ವಕಪ್. ಇಲ್ಲಿ ಏನು ಬೇಕಾದರೂ ಸಂಭವಿಸಬಹುದು.

ಆದ್ದರಿಂದ ಪ್ರತಿಯೊಂದು ದಿನವೂ ನಿಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಬೇಕು. ನೀವು ಎಲ್ಲವನ್ನೂ ಸರಿಯಾಗಿ ಮಾಡಿದರೆ ಗೆಲುವು ನಿಮ್ಮದಾಗುತ್ತದೆ ಎಂದು ಶ್ರೇಯಾಂಕ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ; 11 ತಿಂಗಳಲ್ಲೇ ಗರಿಷ್ಠ ಮಟ್ಟ

ಏನೇ ಶಾಂತಿ ಒಪ್ಪಂದವಾದ್ರೂ ನಾವು ಅಮೆರಿಕವನ್ನ ನಂಬಲ್ಲ: ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟ Iran

2 ಕೋಟಿ ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಯೋಧನ ಕೊಲೆ: FSL ವರದಿಯನ್ನೇ ತಿರುಚಿದ ಖತರ್ನಾಕ್ ಗ್ಯಾಂಗ್, ಪತ್ನಿ, ಆಕೆಯ ಲವರ್ ಸೇರಿ 9 ಮಂದಿ ಬಂಧನ

ಹೇಡಿತನದ ಕೃತ್ಯ: ಜೈಪುರದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ Abhijeet Dipkeಗೆ ಕಪಾಳ ಮೋಕ್ಷ, ಹಲ್ಲೆ! Video

ಮುದುಕ ಗಂಡನ ಜೊತೆ ಖುಷಿಯಾಗಿದ್ದೀರಾ? ಅಭಿಮಾನಿಗೆ ಖಡಕ್ ತಿರುಗೇಟು ಕೊಟ್ಟ Bollywood ನಟ ಅರ್ಬಾಜ್ ಖಾನ್ ಪತ್ನಿ

SCROLL FOR NEXT