ಲಖನೌ: ಆಫ್ಘಾನಿಸ್ತಾನ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 170 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಲಖ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 402 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ತಂಡ 44.3 ಓವರ್ ಗಳಲ್ಲಿ 232 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 170 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು.
403 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಆಫ್ಘಾನಿಸ್ತಾನಕ್ಕೆ ಸೆದಿಖುಲ್ಲಾ ಅಟಲ್ (42), ರಹಮತ್ ಶಾ (79) ಹೋರಾಟದ ಬ್ಯಾಟಿಂಗ್ ಪ್ರದರ್ಶಿಸಿದರಾದರೂ, ಉಳಿದ ಬ್ಯಾಟರ್ ಗಳಿಂದ ಸಾಥ್ ದೊರೆಯಲಿಲ್ಲ. ಪರಿಣಾಮ ಆಫ್ಘಾನಿಸ್ತಾನ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ಉತ್ತಮ ಆರಂಭ
ಬೃಹತ್ ಮೊತ್ತ ಬೆನ್ನು ಹತ್ತಿದ ಆಫ್ಘಾನಿಸ್ತಾನಕ್ಕೆ ಆರಂಭಿಕರಾದ ರೆಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜಡ್ರಾನ್ ಉತ್ತಮ ಆರಂಭ ನೀಡಿದರು. ಗುರ್ಬಾಜ್ 41 ರನ್ ಪೇರಿಸಿದರೆ, ಜಡ್ರಾನ್ 21 ರನ್ ಗಳಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ 52 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ ಗುರ್ಬಾಜ್ ಭಾರತದ ಗುರ್ನೂರ್ ಬ್ರಾರ್ ಬೌಲಿಂಗ್ ವಿಕೆಟ್ ಒಪ್ಪಿಸಿದರೆ, ಅವರ ಬೆನ್ನಲ್ಲೇ ಜಡ್ರಾನ್ ಕೂಡ ಅರ್ಶ್ ದೀಪ್ ಸಿಂಗ್ ಬೌಲಿಂಗ್ ನಲ್ಲಿ ಔಟಾದರು.
ಈ ಹಂತದಲ್ಲಿ ನಾಲ್ಕನೇ ವಿಕೆಟ್ ಗೆ ಜೊತೆಗೂಡಿದ ಸೆದಿಖುಲ್ಲಾ ಅಟಲ್ (42) ಮತ್ತು ರೆಹಮತ್ ಶಾ (79) ಆಫ್ಘನ್ ಇನ್ನಿಂಗ್ಸ್ ಗೆ ಜೀವ ತುಂಬಿದರು. 3ನೇ ವಿಕೆಟ್ ಗೆ ಈ ಜೋಡಿ 57 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ 42 ರನ್ ಗಳಿಸಿದ್ದ ಅಟಲ್ ವಾಷಿಂಗ್ಟನ್ ಸುಂದರ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.
ಆಫ್ಘಾನಿಸ್ತಾನ ಪೆವಿಲಿಯನ್ ಪರೇಡ್
ಈ ವಿಕೆಟ್ ಪತನದ ಬೆನ್ನಲ್ಲೇ ಆಫ್ಘಾನಿಸ್ತಾನ ತಂಡದ ಕೆಳ ಕ್ರಮಾಂಕದ ಪೆವಿಲಿಯನ್ ಪರೇಡ್ ಆರಂಭವಾಯಿತು. ಡಾರ್ವಿಶ್ ರಸೂಲಿ 6 ರನ್ ಗಳಿಸಿದ್ದಾಗ ಗಾಯದ ಸಮಸ್ಯೆಗೆ ತುತ್ತಾಗಿ ಕ್ರೀಡಾಂಗಣ ತೊರೆದರೆ, ನಾಯಕ ಹಷ್ಮತುಲ್ಲಾ ಶಾಹಿದಿ 4, ಖರೋಟಿ 6, ರಷೀದ್ ಖಾನ್ 12, ಘಜನ್ ಫರ್ 1 ಮತ್ತು ಸಲೀಂ ಸಫಿ 9 ರನ್ ಗಳಿಸಿ ಔಟಾದರು.
ಅಂತಿಮವಾಗಿ ಆಫ್ಘಾನಿಸ್ತಾನ 44.3 ಓವರ್ ನಲ್ಲಿ 232ರನ್ ಗಳಿಗೆ ಸರ್ವಪತನ ಕಂಡಿತು. ಆ ಮೂಲಕ ಭಾರತ ಬರೊಬ್ಬರಿ 170 ರನ್ ಗಳ ಅಂತರದಲ್ಲಿ ಭಾರಿ ಜಯ ದಾಖಲಿಸಿತು. ಅಂತೆಯೇ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ 2-0 ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ.
ಅಂತೆಯೇ ನಾಯಕ ಶುಭ್ ಮನ್ ಗಿಲ್ ಗೆ ಇದು ಮೊದಲ ಏಕದಿನ ಸರಣಿ ಜಯವಾಗಿದೆ. ಅಂತೆಯೇ ಸರಣಿಯ ಮುಂದಿನ ಪಂದ್ಯ ಜೂನ್ 20ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.