ಮುಂಬೈ: ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದಾಗಿ ಮುಂಬರುವ ಇಂಗ್ಲೆಂಡ್ ಸರಣಿಯಿಂದ ಹೊರಗುಳಿಯಲಿದ್ದು, ಟೀಂ ಇಂಡಿಯಾಗೆ ಭಾರೀ ಹಿನ್ನಡೆಯಾಗಿದೆ ಎಂದು ಮೂಲಗಳು ANIಗೆ ದೃಢಪಡಿಸಿವೆ.
ಭಾರತ - ಇಂಗ್ಲೆಂಡ್ ನಡುವಿನ ಸರಣಿಯು ಜುಲೈ 1 ರಂದು ಆರಂಭವಾಗಲಿದ್ದು, ಐದು ಪಂದ್ಯಗಳ T20 ಸರಣಿಯು ಜುಲೈ 1, 4, 7, 9 ಹಾಗೂ 11ರಂದು ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ.
ಹಾರ್ದಿಕ್ ಪಾಂಡ್ಯ ಅವರು ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಳ್ಳಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡದಿರಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ.
2026ರ ಐಪಿಎಲ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದರು. ಈ ಸಮಸ್ಯೆಯ ಕಾರಣ ಅವರು ಮುಂಬೈ ಇಂಡಿಯನ್ಸ್ ತಂಡದ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಆದಾಗ್ಯೂ ಅವರನ್ನು ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು.
ಆದರೆ ಸಂಪೂರ್ಣ ಫಿಟ್ನೆಸ್ ಸಾಧಿಸದ ಕಾರಣ ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ಅವರನ್ನು ಕೈ ಬಿಡಲಾಗಿತ್ತು. ಆದರೆ ಅವರು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಅದರಂತೆ ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರದಲ್ಲಿ ತರಬೇತಿ ಮತ್ತು ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗಿದ್ದರು. ಆದರೀಗ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಸಲಾದ ಫಿಟ್ನೆಸ್ ಟೆಸ್ಟ್ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ವಿಫಲರಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಅವರನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(IPL) 2026ರ ಫೈನಲ್‌ನಲ್ಲಿ ಮಂಡಿ ಗಾಯದಿಂದ ದೂರ ಉಳಿದಿದ್ದಾರೆ.