ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯದ ವೇಳೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರ ವಿವಾದಾತ್ಮಕ ಔಟ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಿಟಿಯ ಜೇಸನ್ ಹೋಲ್ಡರ್ ಕ್ಲೀನ್ ಕ್ಯಾಚ್ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎಂದು ಸೂಚಿಸಿದ ನಂತರ ಮೂರನೇ ಅಂಪೈರ್ ನಿರ್ಧಾರದಿಂದ ಅತೃಪ್ತರಾದ ಕೊಹ್ಲಿ, ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಇದರಿಂದ ಅಂಪೈರ್ ನಿರ್ಧಾರ ಬದಲಾಗದಿದ್ದರೂ, ಮಾಜಿ ಅಂಪೈರ್ ಅನಿಲ್ ಚೌಧರಿ ಈ ವಿವಾದದ ಬಗ್ಗೆ ಮತ್ತಷ್ಟು ಚರ್ಚೆಗೆ ಗ್ರಾಸವಾಗುವಂತಹ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಚೌಧರಿ, ಅಂತಹ ಕ್ಯಾಚ್‌ಗಳನ್ನು ನಿರ್ಣಯಿಸುವ ಮೊದಲು ಅಂಪೈರ್ ಒಬ್ಬರು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ವಿವರಿಸಿದ್ದು, ರಜತ್ ಪಾಟೀದಾರ್ ಅವರನ್ನು ನಾಟ್ ಔಟ್ ಆಗಿ ತೀರ್ಮಾನ ನೀಡಬೇಕಾಗಿತ್ತು ಎಂದಿದ್ದಾರೆ.
'ನೀವು ಎರಡು ವಿಷಯಗಳನ್ನು ನೋಡಬೇಕು. ಮೊದಲನೆಯದಾಗಿ, ಕ್ಯಾಚ್ ನಿಯಂತ್ರಣ ಮತ್ತು ಎರಡನೆಯದಾಗಿ, ದೇಹದ ಚಲನೆ. ಹೋಲ್ಡರ್ ತನ್ನ ದೇಹದ ಮೇಲೆ ಹಿಡಿತ ಸಾಧಿಸುವ ಮೊದಲು, ಅವರ ಅಂಗೈ ಕೆಳಕ್ಕೆ ಹೋಯಿತು ಮತ್ತು ಚೆಂಡು ನೆಲಕ್ಕೆ ತಾಗಿತು. ಅದು ಔಟ್ ಆಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಟಿವಿ ಅಂಪೈರ್ ಏನು ನೋಡಿದರು ಎಂದು ನನಗೆ ಖಚಿತವಿಲ್ಲ' ಎಂದು ಹೇಳಿದರು.
ಮೊದಲ ಇನಿಂಗ್ಸ್‌ನ ಪ್ರಮುಖ ಹಂತದಲ್ಲಿ ಆರ್‌ಸಿಬಿ ತಂಡವು ಉತ್ತಮ ಮೊತ್ತ ಕಲೆಹಾಕಲು ಪ್ರಯತ್ನಿಸುತ್ತಿದ್ದಾಗ ಈ ಪರಿಸ್ಥಿತಿ ನಿರ್ಮಾಣವಾಯಿತು. ಎಂಟನೇ ಓವರ್‌ನಲ್ಲಿ, 19 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಪಾಟೀದಾರ್, ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಆ ಬಾಲನ್ನು ಕಗಿಸೋ ರಬಾಡ ಮತ್ತು ಜೇಸನ್ ಹೋಲ್ಡರ್ ಹಿಂಬಾಲಿಸಿದರು. ಅಂತಿಮವಾಗಿ ಹೋಲ್ಡರ್ ಮುಂದಕ್ಕೆ ಡೈವ್ ಹಾಕಿ ಕ್ಯಾಚ್ ಹಿಡಿಯಲು ಮುಂದಾದರು. ಕ್ಯಾಚ್ ಹಿಡಿದರೂ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಆಗ ಚೆಂಡನ್ನು ಹಿಡಿದಿದ್ದ ಕೈ ನೆಲಕ್ಕೆ ತಾಗಿತು.
ಚೆಂಡು ನೆಲಕ್ಕೆ ತಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಯಿತು. ಆಗ ಮೂರನೇ ಅಂಪೈರ್ ಪರಿಶೀಲನೆಯ ನಂತರ ಕ್ಯಾಚ್ ನ್ಯಾಯಯುತವಾಗಿತ್ತು ಮತ್ತು ಪಾಟೀದಾರ್ ಅವರನ್ನು ಔಟ್ ಎಂದು ತೀರ್ಮಾನಿಸಲಾಯಿತು. ಪಂದ್ಯದ ನಿರ್ಣಾಯಕ ಹಂತದಲ್ಲಿ ಈ ವಿವಾದಾತ್ಮಕ ತೀರ್ಪಿನಿಂದ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಶಿಬಿರವನ್ನು ಅತೃಪ್ತಿಗೊಳಿಸಿತು. 13 ಎಸೆತಗಳಲ್ಲಿ 28 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದ ಕೊಹ್ಲಿ, ನಂತರ ಬೌಂಡರಿ ಲೈನ್ ಹೊರಗೆ ನಾಲ್ಕನೇ ಅಂಪೈರ್ ಜೊತೆ ಸುದೀರ್ಘ ಸಂಭಾಷಣೆಯಲ್ಲಿ ತೊಡಗಿರುವುದು ಕಂಡುಬಂತು.
ಇತ್ತೀಚಿನ ಫಾರ್ಮ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಸ್ಥಿರವಾಗಿ ರನ್ ಗಳಿಸುತ್ತಿದ್ದ ಪಾಟೀದಾರ್ ಅವರ ವಿಕೆಟ್ ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಯಿತು. ನಾಯಕನ ವಿಕೆಟ್ ಪತನಗೊಂಡ ನಂತರ, ಆರ್‌ಸಿಬಿ ಕೇವಲ ನಾಲ್ಕು ಓವರ್‌ಗಳ ಅವಧಿಯಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಅರ್ಷದ್ ಖಾನ್ ಮೂರು ವಿಕೆಟ್‌ಗಳೊಂದಿಗೆ ಮಿಂಚಿದ್ದರಿಂದ ಆರ್‌ಸಿಬಿ 19.2 ಓವರ್‌ಗಳಲ್ಲಿ ಕೇವಲ 155 ರನ್‌ಗಳಿಗೆ ಆಲೌಟ್ ಆಯಿತು.