ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದು, ಈ ಗೆಲುವನ್ನು ಇತ್ತೀಚೆಗೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಇಬ್ಬರು ಯುವ ಅಭಿಮಾನಿಗಳಿಗೆ ಫ್ರಾಂಚೈಸಿ ಅರ್ಪಿಸಿದೆ. ಏಪ್ರಿಲ್ 27 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ವೀಕ್ಷಿಸಿ ಮನೆಗೆ ಮರಳುತ್ತಿದ್ದಾಗ ಹಿಟ್ ಅಂಡ್ ರನ್ ಘಟನೆಯಲ್ಲಿ ಸೋದರಸಂಬಂಧಿಗಳಾದ ಯಜ್ಞ ಭಾಟಿಯಾ ಮತ್ತು ಅಭವ್ ಭಾಟಿಯಾ ಎಂಬುವವರು ಸಾವಿಗೀಡಾಗಿದ್ದರು. ಜೈಪುರದಲ್ಲಿ ಶುಕ್ರವಾರ ತಂಡವು ಗೆಲುವಿನ ಹಾದಿಗೆ ಮರಳಿದಾಗ ಮುಖ್ಯ ಕೋಚ್ ಹೇಮಾಂಗ್ ಬದನಿ ಡ್ರೆಸ್ಸಿಂಗ್ ಕೋಣೆಯಲ್ಲಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿ, ಅಪಘಾತದಲ್ಲಿ ಸಾವಿಗೀಡಾದ ಈ ಇಬ್ಬರು ಅಭಿಮಾನಿಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದರು.
'ದುರದೃಷ್ಟವಶಾತ್ ನಮ್ಮೊಂದಿಗೆ ಈಗ ಇಲ್ಲದ ಇಬ್ಬರು ಯುವ ಅಭಿಮಾನಿಗಳಾದ ಯಜ್ಞ ಮತ್ತು ಅಭವ್ ಭಾಟಿಯಾ ಅವರಿಗೆ ಈ ಗೆಲುವು ಸಮರ್ಪಿತವಾಗಿದೆ. ಈ ಗೆಲುವು ಅವರಿಗಾಗಿ. ನೀವು ಅವರನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಅವರು ದೊಡ್ಡ ಡಿಸಿ ಅಭಿಮಾನಿಗಳು, ಅವರು ಸ್ವಲ್ಪ ಸಮಯದಿಂದ ನಮ್ಮೊಂದಿಗಿದ್ದಾರೆ. ನೀವು ಅವರ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ನೋಡಿರಬಹುದು. ಈ ಗೆಲುವು ಅವರಿಗಾಗಿ. ಚೆನ್ನಾಗಿ ಮಾಡಿದ್ದೀರಿ ಹುಡುಗರೇ, ತುಂಬಾ ಚೆನ್ನಾಗಿ ಮಾಡಿದ್ದೀರಿ. ಒಳ್ಳೆಯ ವಿಷಯ' ಎಂದು ಬದನಿ ಸಾಮಾಜಿಕ ಮಾಧ್ಯಮದಲ್ಲಿ ಫ್ರಾಂಚೈಸಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.
ಪಂದ್ಯದ ನಂತರದ ಪ್ರಸ್ತುತಿಯ ಸಂದರ್ಭದಲ್ಲಿ ಡಿಸಿ ನಾಯಕ ಅಕ್ಷರ್ ಪಟೇಲ್ ಈ ಘಟನೆಯ ಬಗ್ಗೆ ಮಾತನಾಡುತ್ತಾ, 'ಕಳೆದ ಪಂದ್ಯದ ನಂತರ ನಮ್ಮ ಇಬ್ಬರು ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದಾರೆ. ಅವರ ಸಾವಿಗೆ ನನ್ನ ಆಳವಾದ ಸಂತಾಪ ವ್ಯಕ್ತಪಡಿಸುತ್ತೇನೆ. ನಾನು ಈ ಗೆಲುವನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ; ಅವರು ನಮ್ಮ ಡಿಸಿ ಕುಟುಂಬದ ಇಬ್ಬರು ಸದಸ್ಯರು. ಎಲ್ಲರಿಗೂ ತುಂಬಾ ಧನ್ಯವಾದಗಳು' ಎಂದು ಹೇಳಿದರು.
ಪೊಲೀಸ್ ವರದಿಗಳ ಪ್ರಕಾರ, ಅಶೋಕ ರಸ್ತೆಯ ಮಹಾದೇವ್ ರಸ್ತೆಯ ಟಿ-ಪಾಯಿಂಟ್ ಬಳಿ ಸೋದರಸಂಬಂಧಿಗಳು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್‌ಗೆ ಟ್ರಕ್ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ ಎಂದು ಹೇಳಲಾಗಿದೆ. ಇಬ್ಬರೂ ಸಂತ್ರಸ್ತರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು.
ಅಶೋಕ್ ನಗರದ ನಿವಾಸಿಗಳಾದ ಯಜ್ಞ (20) ಮತ್ತು ಅಭವ್ (14) 'ಡಿಸಿ ಟೋಲಿ' ಬೆಂಬಲಿಗರ ಗುಂಪಿನ ಸಕ್ರಿಯ ಸದಸ್ಯರಾಗಿದ್ದರು ಮತ್ತು ಫ್ರಾಂಚೈಸಿಗೆ ತಮ್ಮ ಬೆಂಬಲ ನೀಡಿದ್ದರು.