ಗುರುವಾರ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ರೋಮಾಂಚಕ ಗೆಲುವಿನ ನಂತರ ಮುಂಬೈ ಇಂಡಿಯನ್ಸ್ (MI) ತಂಡವು ಗೆಲುವಿನ ಹಾದಿಗೆ ಮರಳಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಅಭಿಯಾನದಲ್ಲಿ ನಾಲ್ಕನೇ ಗೆಲುವು ದಾಖಲಿಸಿದೆ. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಪಂದ್ಯದಿಂದ ಹೊರಗುಳಿದ ನಂತರ ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿದ್ದರು. ಹಾರ್ದಿಕ್ ಅನುಪಸ್ಥಿತಿಗೆ ಬೆನ್ನು ನೋವು ಕಾರಣ ಎಂದು ಮುಂಬೈ ಸೂಚಿಸಿದ್ದರೂ, ಬೇರೆ ರೀತಿಯ ವದಂತಿಗಳು ಕೇಳಿಬರುತ್ತಿವೆ. ಈ ವದಂತಿಗಳು ನಿಜವಾಗಿದ್ದರೆ ಹಾರ್ದಿಕ್ ಪಾಂಡ್ಯ ಅವರನ್ನು ಫ್ರಾಂಚೈಸಿ ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಗೈರಾಗಿರುವುದರಿಂದ, ಅವರ ಮತ್ತು ಕೆಲವು ಆಟಗಾರರ ನಡುವೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳು ಹೊರಬಿದ್ದಿವೆ. ಈ ಎಲ್ಲ ವದಂತಿಗಳು ನಿಜವೆಂದು ಸೆಹ್ವಾಗ್ ನಂಬದಿದ್ದರೂ, ಅದು ನಿಜವಾಗಿದ್ದರೆ ಫ್ರಾಂಚೈಸಿ ಹಾರ್ದಿಕ್ ಅವರನ್ನು ಕೈಬಿಡಬೇಕು ಎಂದಿದ್ದಾರೆ.
'ನೀವು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಿದರೆ, ಅವರನ್ನು ಉಳಿಸಿಕೊಳ್ಳಿ. ಆದರೆ, ಡ್ರೆಸ್ಸಿಂಗ್ ರೂಮ್ ಒತ್ತಡ ಅಥವಾ ಮೈದಾನದ ಹೊರಗಿನ ಸಮಸ್ಯೆಗಳ ಬಗ್ಗೆ ಕೇಳಿಬರುತ್ತಿರುವ ವದಂತಿಗಳು ನಿಜವೆಂಬುದರ ಬಗ್ಗೆ ನನಗೆ ಖಚಿತವಿಲ್ಲ. ಅದು ನಿಜವಾಗಿದ್ದರೆ, ಅವರನ್ನು ಬಿಡುಗಡೆ ಮಾಡಿ. ಕ್ರಿಕೆಟ್ ಆಧರಿಸಿದ್ದಾಗಿದ್ದರೆ, ಅವರನ್ನು ಉಳಿಸಿಕೊಳ್ಳಬೇಕು ಏಕೆಂದರೆ ಅವರು ಉತ್ತಮ ಗುಣಮಟ್ಟದ ಆಟಗಾರ. ವೈಯಕ್ತಿಕವಾಗಿ, ನಾನು ಹಾರ್ದಿಕ್ ಅವರನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತೇನೆ' ಎಂದು ಕ್ರಿಕ್‌ಬಜ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಅವರು ಹೇಳಿದರು.
'ವದಂತಿಗಳ ಹೊರತಾಗಿಯೂ, ನಾನು ಅವರನ್ನು ಉಳಿಸಿಕೊಳ್ಳುತ್ತೇನೆ. ನೀವು ಯಾವಾಗಲೂ ಅದನ್ನು ಕೊನೆಗೊಳಿಸಬಹುದು. ಆ ಡ್ರೆಸ್ಸಿಂಗ್ ರೂಮ್ ವ್ಯತ್ಯಾಸಗಳು ನಿಜವಾಗಿದ್ದರೆ, ಅವುಗಳನ್ನು ಪರಿಹರಿಸಬಹುದು. ಏಕೆಂದರೆ ನೀವು ಒಂದು ತಂಡವಾಗಿ ಆಡಬೇಕು. ಮತ್ತು ಹಾರ್ದಿಕ್ ಒಬ್ಬ ಆಟಗಾರನಾಗಿ ಹೆಚ್ಚು ಮೌಲ್ಯಯುತ. ಮುಂಬೈ ಇಂಡಿಯನ್ಸ್‌ಗೆ ಅವರ ಅವಶ್ಯಕತೆ ಇದೆ' ಎಂದರು.
ಸದ್ಯ, ಐಪಿಎಲ್‌ನಲ್ಲಿ ಅತ್ಯಂತ ದುಬಾರಿ ಆಟಗಾರ ರಿಷಭ್ ಪಂತ್ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ₹27 ಕೋಟಿಗೆ ಖರೀದಿಸಲಾಗಿದೆ. ಹಾರ್ದಿಕ್ ಕೂಡ ಪಂತ್ ಪಡೆದ ಮೌಲ್ಯವಿರುವ ವ್ಯಕ್ತಿ, ಅವರ ಸದ್ಯದ ಸಂಬಳ ₹16 ಕೋಟಿ ಅಲ್ಲ ಎಂದು ಸೆಹ್ವಾಗ್ ಭಾವಿಸಿದ್ದಾರೆ.
'ನೆನಪಿಡಿ, ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕನಲ್ಲದಿದ್ದರೂ ಸಹ ಚೆನ್ನಾಗಿ ಆಡುತ್ತಿದ್ದರು. ಆಗಲೂ ವದಂತಿಗಳಿದ್ದವು. ಆದರೆ, ನಾನು ಅವರನ್ನು ಇನ್ನೂ ಉಳಿಸಿಕೊಳ್ಳುತ್ತೇನೆ. ವಾಸ್ತವವಾಗಿ, ₹16.35 ಕೋಟಿ ತುಂಬಾ ಕಡಿಮೆ. ಅವರು ₹27 ಕೋಟಿ ಮೌಲ್ಯದ ಆಟಗಾರ' ಎಂದು ಅವರು ಹೇಳಿದರು.
ಐಪಿಎಲ್ 2026 ರ ಸೀಸನ್ ಮುಗಿಯುವ ಮೊದಲು ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಉಳಿದಿರುವ ಯಾವುದೇ ಪಂದ್ಯಗಳಲ್ಲಿ ಹಾರ್ದಿಕ್ ಮತ್ತೆ ಆಡುತ್ತಾರಾ ಎಂಬುದು ಕುತೂಹಲಕಾರಿಯಾಗಿದೆ.