ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿ ಕೊನೆಯ ಹಂತದತ್ತ ಸಾಗುತ್ತಿದ್ದು, ಇಡೀ ಆವೃತ್ತಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಎಂಎಸ್ ಧೋನಿ ಆಡಿಯೇ ಇಲ್ಲ. ಹೀಗಾಗಿ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಎಂಎಸ್ ಧೋನಿಯನ್ನು ಆಡಿಸುವುದು ಅಪಾಯಕಾರಿ. ಈ ಹಂತದಲ್ಲಿ ಧೋನಿ ತನ್ನ ಗಾಯವನ್ನು ಇನ್ನಷ್ಟು ಹದಗೆಡಿಸುವ ಅಪಾಯವನ್ನು ಎದುರಿಸಲು ಬಯಸುವುದಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಈ ಆವೃತ್ತಿಯ ಮೊದಲ ಎರಡು ವಾರ ಕಾಲಿನ ಸ್ನಾಯುಗಳ ಸೆಳೆತದಿಂದಾಗಿ ಹೊರಗುಳಿದಿದ್ದ ಧೋನಿ, ಇಡೀ ಆವೃತ್ತಿಯಲ್ಲಿ ಕಾಣಿಸಿಕೊಂಡಿಲ್ಲ ಮತ್ತು ಒಂದು ವರ್ಷದಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಇಂದು ಆಡಲಿದ್ದು, ನಂತರ ಗುಜರಾತ್ ಟೈಟಾನ್ಸ್ (GT) ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಈ ಎರಡೂ ಪಂದ್ಯಗಳಲ್ಲಿ ಗೆಲ್ಲುವುದು ಪ್ಲೇಆಫ್ ಅವಕಾಶಗಳಿಗೆ ನಿರ್ಣಾಯಕವಾಗಿರುವುದರಿಂದ, ಧೋನಿ ಪ್ಲೇಯಿಂಗ್ XI ಗೆ ಮರಳುತ್ತಾರೆಯೇ ಎಂಬ ಕುತೂಹಲ ಇದೀಗ ಮನೆಮಾಡಿದೆ.
ಸ್ಟಾರ್ ಸ್ಪೋರ್ಟ್ಸ್ 'ಕ್ರಿಕೆಟ್ ಲೈವ್' ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಸ್ಕರ್, ಇಂತಹ ಮಹತ್ವದ ಪಂದ್ಯಕ್ಕೆ ಸಿಎಸ್‌ಕೆ ತಂಡಕ್ಕೆ ಇತ್ತೀಚೆಗೆ ಫಿಟ್ ಆಗಿರುವ ಮತ್ತು ಸ್ಥಿರವಾಗಿ ಆಡುವ ಆಟಗಾರರು ಬೇಕಾಗಿದ್ದಾರೆ. ತಂಡಕ್ಕೆ ಧೋನಿ ಮುಖ್ಯವಾಗಿದ್ದರೂ ಕೂಡ, ಈ ಆವೃತ್ತಿಯಲ್ಲಿ ಸಿಎಸ್‌ಕೆ ತಂಡಕ್ಕೆ ಉತ್ತಮ ಯಶಸ್ಸನ್ನು ತಂದುಕೊಟ್ಟಿರುವ ತಂಡದ ಪ್ಲೇಯಿಂಗ್ ಇಲೆವೆನ್ ಅನ್ನು ಬದಲಿಸುವ ಅಪಾಯವನ್ನು ಅವರು ತೆಗೆದುಕೊಳ್ಳುವುದಿಲ್ಲ' ಎಂದು ಹೇಳಿದರು.
'SRH ವಿರುದ್ಧದ ಪಂದ್ಯ CSKಗೆ ನಿರ್ಣಾಯಕ. ಇದು ಚೆಪಾಕ್‌ನಲ್ಲಿ ಅವರ ಕೊನೆಯ ತವರಿನ ಪಂದ್ಯ. ಆದ್ದರಿಂದ, ಸ್ವಾಭಾವಿಕವಾಗಿಯೇ ಅಭಿಮಾನಿಗಳು MS ಧೋನಿ ಆಟವನ್ನು ನೋಡಲು ಬಯಸುತ್ತಾರೆ. ಆದರೆ, ಅವರು ಈ ಆವೃತ್ತಿಯಲ್ಲಿ ಈವರೆಗೂ ಕಾಣಿಸಿಕೊಂಡಿಲ್ಲ. ವಾಸ್ತವವಾಗಿ, ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಆದ್ದರಿಂದ, ಅವರು ಈ ಹಂತದಲ್ಲಿ ಅಂತಹ ಅಪಾಯವನ್ನು ತೆಗೆದುಕೊಳ್ಳಲು ಬಯಸುತ್ತಾರೆಯೇ ಎಂಬ ಬಗ್ಗೆ ನನಗೆ ಸಂದೇಹವಿದೆ. ಕಳೆದ ಆರು ವಾರಗಳಿಂದ ಮ್ಯಾಚ್-ಫಿಟ್ ಆಗಿರುವ ಮತ್ತು ನಿಯಮಿತವಾಗಿ ಆಡುತ್ತಿರುವ ಆಟಗಾರರು ನಿಮಗೆ ಬೇಕು. ಧೋನಿ ಸಂಪೂರ್ಣ ತಂಡದ ವ್ಯಕ್ತಿ. ಅವರು ಸದ್ಯದ ಸಂಯೋಜನೆಯನ್ನು ಅಡ್ಡಿಪಡಿಸಲು ಬಯಸುತ್ತಾರೆ ಎಂದು ನಾನು ಭಾವಿಸುವುದಿಲ್ಲ' ಎಂದು ಅವರು ಹೇಳಿದರು.
'ಅವರು SRH ವಿರುದ್ಧದ ಪಂದ್ಯದಲ್ಲಿ ಆಡಿದರೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ. ಇದು CSKಗೆ ಗೆಲ್ಲಲೇಬೇಕಾದ ಪಂದ್ಯ. ಒಂದು ಗೆಲುವು ಅವರನ್ನು ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿರಿಸುತ್ತದೆ. ಅವರು ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಆಡದ ಆಟಗಾರನನ್ನು ಕರೆತರುವುದು ಒಂದು ಜೂಜಾಟವಾಗಬಹುದು' ಎಂದರು.
ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಪ್ರಕಾರ, ಧೋನಿ ಭಾನುವಾರ 30-40 ನಿಮಿಷಗಳ ಕಾಲ ಥ್ರೋಡೌನ್‌ಗಳು ಮತ್ತು ಸ್ಪಿನ್ನರ್‌ಗಳನ್ನು ಎದುರಿಸುತ್ತಾ ತರಬೇತಿ ಪಡೆದರು.
278 ಐಪಿಎಲ್ ಪಂದ್ಯಗಳಲ್ಲಿ, ಧೋನಿ 242 ಇನಿಂಗ್ಸ್‌ಗಳಲ್ಲಿ 38.30 ಸರಾಸರಿ ಮತ್ತು 137.45 ಸ್ಟ್ರೈಕ್ ರೇಟ್‌ನಲ್ಲಿ 5,439 ರನ್ ಗಳಿಸಿದ್ದಾರೆ. ಇದರಲ್ಲಿ 24 ಅರ್ಧಶತಕಗಳು ಮತ್ತು 84* ಅವರ ಅತ್ಯುತ್ತಮ ಸ್ಕೋರ್ ಸೇರಿದೆ. ಅವರು ಟೂರ್ನಮೆಂಟ್ ಇತಿಹಾಸದಲ್ಲಿ ಏಳನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಧೋನಿ 13 ಇನಿಂಗ್ಸ್‌ಗಳಲ್ಲಿ 24.50 ಸರಾಸರಿ ಮತ್ತು 135 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದರು. ಅವರ ಅತ್ಯುತ್ತಮ ಸ್ಕೋರ್ 30* ಆಗಿದೆ.
ಐಪಿಎಲ್ 2025ಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಧೋನಿಯನ್ನು "ಅನ್‌ಕ್ಯಾಪ್ಡ್ ಪ್ಲೇಯರ್" ಆಗಿ ₹4 ಕೋಟಿಗೆ ಉಳಿಸಿಕೊಂಡಿತು ಮತ್ತು ಐಪಿಎಲ್ 2026ರವರೆಗೆ ಅದನ್ನು ವಿಸ್ತರಿಸಲಾಯಿತು. ಅವರ ಸಂಬಳವನ್ನು 4 ಕೋಟಿ ರೂ.ನಲ್ಲಿಯೇ ಉಳಿಸಿಕೊಂಡಿತು.