ಮುಂಬೈ: ಐಪಿಎಲ್ 2026ರ ಟೂರ್ನಿಯಲ್ಲಿ ಈಗಾಗಲೇ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಭಿನ್ನಮತ ಮತ್ತೆ ಸುದ್ದಿಗೆ ಗ್ರಾಸವಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಹಾಲಿ ನಾಯಕ ಹಾರ್ದಿಕ್ ಪಾಂಡ್ಯಾ "ತಂಡದ ವಾತಾವರಣವನ್ನು ಹಾಳುಮಾಡಿದ್ದು, ರೋಹಿತ್ ಶರ್ಮಾಗೆ ಮತ್ತೆ ಗೌರವ ನೀಡಲು ಮುಂಬೈ ಇಂಡಿಯನ್ಸ್‌ಗೆ ಸಲಹೆ ನೀಡಲಾಗಿದೆ.
ಕೆಲ ಕ್ರಿಕೆಟ್ ತಜ್ಞರು ಮತ್ತು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಹಾರ್ದಿಕ್ ಪಾಂಡ್ಯಾ ವರ್ತನೆ ವಿರುದ್ದ ಕೆಂಡಾಮಂಡಲರಾಗಿದ್ದು ಕೂಡಲೇ ಹಾರ್ದಿಕ್ ರನ್ನು ನಾಯಕತ್ವದಿಂದ ಕೈಬಿಟ್ಟು ಮತ್ತೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಮರಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಮೂರು ಸಂಪೂರ್ಣ ಐಪಿಎಲ್ ಸೀಸನ್‌ಗಳ ನಂತರ, ಮುಂಬೈ ಇಂಡಿಯನ್ಸ್ (MI) ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯಾರನ್ನು ನಾಯಕನನ್ನಾಗಿ ಮಾಡಿದ ನಿರ್ಧಾರ ಯಶಸ್ವಿಯಾಗಿಲ್ಲ ಎಂದು ಹೇಳಬಹುದು. ಹಾರ್ದಿಕ್ ನಾಯಕತ್ವದಲ್ಲಿ MI ಐಪಿಎಲ್ 2024ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿತ್ತು ಮತ್ತು ಐಪಿಎಲ್ 2026ಲ್ಲೂ ಮತ್ತೆ ಕೊನೆಯ ಸ್ಥಾನಕ್ಕೇ ಹೋಗುವ ಸಾಧ್ಯತೆ ಇದೆ.
ರೋಹಿತ್ ಶರ್ಮಾಗೆ ನಾಯಕತ್ವ ಮರಳಿಸಿ
ಈ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ, 'ರೋಹಿತ್ ಶರ್ಮಾ ತಮ್ಮ MI ಸಾಮ್ರಾಜ್ಯ ಕುಸಿಯುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದಾರೆ. ಮುಂದಿನ ಸೀಸನ್‌ನಲ್ಲಿ ಮತ್ತೆ ರೋಹಿತ್‌ಗೆ ನಾಯಕತ್ವ ನೀಡಬೇಕು ಎಂದು ಆಗ್ರಹಿಸಿದರು.
ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ಮನೋಜ್ ತಿವಾರಿ, "ಕಳೆದ ಮೂರು ವರ್ಷಗಳಲ್ಲಿ ರೋಹಿತ್ ಶರ್ಮಾ ತಮ್ಮ ಸಾಮ್ರಾಜ್ಯ ಕುಸಿಯುತ್ತಿರುವುದನ್ನು ತಮ್ಮ ಕಣ್ಣಾರೆ ನೋಡಿದ್ದಾರೆ. ಕೆಲವೊಮ್ಮೆ ಡಗೌಟ್‌ನಲ್ಲಿ ಅವರ ಮುಖಭಾವದಲ್ಲೇ ಅದು ಕಾಣಿಸುತ್ತದೆ. ಅವರು ನಾಯಕನಾಗಿದ್ದರೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಅವರಿಗೆ ಒಳಗಿಂದ ಗೊತ್ತಿದೆ ಎಂದರು.
ಮುಂದಿನ ಸೀಸನ್ ಗೆ ಹೊಸ ನಾಯಕ
"ಮುಂದಿನ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಖಂಡಿತವಾಗಿಯೂ ಹೊಸ ನಾಯಕನಿರುತ್ತಾರೆ. ಅದು ಸೂರ್ಯಕುಮಾರ್ ಯಾದವ್ ಆಗಿರಬಹುದು ಅಥವಾ ಜಸ್ಪ್ರೀತ್ ಬುಮ್ರಾ ಆಗಿರಬಹುದು. ಆದರೆ ಬುಮ್ರಾ ವೇಗದ ಬೌಲರ್ ಆಗಿರುವುದರಿಂದ ಗಾಯದ ಅಪಾಯ ಇರುತ್ತದೆ. ಆದ್ದರಿಂದ ಸೂರ್ಯಕುಮಾರ್ ಯಾದವ್‌ರನ್ನು ಆಯ್ಕೆ ಮಾಡಬೇಕು," ಎಂದು ತಿವಾರಿ ಸಲಹೆ ನೀಡಿದರು.
ಅಂತೆಯೇ "ಆದರೆ ನನ್ನ ಹೃದಯದ ಆಶಯವೆಂದರೆ ರೋಹಿತ್ ಅವರನ್ನು ಮತ್ತೆ ನಾಯಕನನ್ನಾಗಿ ಮಾಡಬೇಕು. ಅವರಿಗೆ ಮತ್ತೆ ಗೌರವ ನೀಡಬೇಕು. ಅವರು ಮರಳಿದರೆ ಮತ್ತೆ ಒಳ್ಳೆಯ ತಂಡವನ್ನು ಕಟ್ಟುವ ಸಾಮರ್ಥ್ಯ ಅವರಿಗಿದೆ," ಎಂದರು.
ಧನಿಗೂಡಿಸಿದ ಮುರಕಳಿ ಕಾರ್ತಿಕ್
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿ ಕೂಡ ರೋಹಿತ್ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದು, 'ರೋಹಿತ್, ಸೂರ್ಯಕುಮಾರ್ ಮತ್ತು ಬುಮ್ರಾ ಅವರಂತಹ ಉಳಿಸಿಕೊಂಡ ಆಟಗಾರರಿಗಿಂತ ಹೊರಗಿನಿಂದ ಬಂದ ಹಾರ್ದಿಕ್‌ಗೆ ನಾಯಕತ್ವ ನೀಡಿದ ನಿರ್ಧಾರ ತಂಡದ ವಾತಾವರಣವನ್ನು ಕೆಡಿಸಿದೆ ಎಂದು ಹೇಳಿದರು.
"ಯಾವ ಆಟಗಾರರನ್ನು ತಂಡ ಉಳಿಸಿಕೊಂಡಿತ್ತು? ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್. ಅವರು ನಿಮ್ಮ ಪ್ರಮುಖ ಆಟಗಾರರು. ಆದರೆ ಹಠಾತ್ತನೆ ಹೊರಗಿನಿಂದ ಒಬ್ಬರನ್ನು ಕರೆತಂದು ನಾಯಕನನ್ನಾಗಿ ಮಾಡಿದರು. ಅದು ತಂಡದ ವಾತಾವರಣವನ್ನು ಹಾಳುಮಾಡುವುದು ಸಹಜ. ಪರಿಸ್ಥಿತಿ ಏನೇ ಇರಲಿ, ಆಟಗಾರರಿಗೆ ಆಘಾತವಾಗುವುದು ಸಹಜ," ಎಂದು ಕಾರ್ತಿಕ್ ಹೇಳಿದರು.