ಸೆಡ್ಡನ್ ಪಾರ್ಕ್: ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ 32 ಎಸೆತಗಳಲ್ಲಿ 61 ರನ್ ಸಿಡಿಸಿದ ಇಶಾನ್ ಕಿಶನ್, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2,000 ರನ್ಗಳ ಮೈಲಿಗಲ್ಲನ್ನೂ ತಲುಪಿದರು. ಈ ಮೂಲಕ 2,000 ಟಿ20ಐ ರನ್ ಪೂರೈಸಿದ ಭಾರತದ ಮೂರನೇ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಂತೆಯೇ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಶಾನ್ ಕಿಶನ್ ಈ ಸಾಧನೆ ಮಾಡಲು 1,345 ಎಸೆತಗಳನ್ನು ಎದುರಿಸಿದ್ದಾರೆ. ಅಭಿಷೇಕ್ ಶರ್ಮಾ ಕೇವಲ 1,024 ಎಸೆತಗಳಲ್ಲಿ 2,000 ರನ್ ಪೂರೈಸಿ ಭಾರತೀಯರ ಪೈಕಿ ಮೊದಲ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ 1,164 ಎಸೆತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ ದಾಖಲೆ ಪತನ
ಇಶಾನ್ ಕಿಶನ್ ಈ ವರ್ಷ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 1,220 ರನ್ ಗಳಿಸಿದ್ದು, ಈ ಮೂಲಕ 2022ರಲ್ಲಿ 1,164 ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ 2ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 2021ರಲ್ಲಿ ಗಳಿಸಿದ್ದ 1,326 ರನ್ಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.
ಗಾಯದಿಂದ ಚೇತರಿಸಿಕೊಂಡು ಅಬ್ಬರಿಸಿದ ಇಶಾನ್
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಆರಂಭದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆಡಿದ ಮೊದಲ ಹಾಗೂ ನಾಲ್ಕನೇ ಪಂದ್ಯಗಳಲ್ಲಿ ಕ್ರಮವಾಗಿ 1 ಮತ್ತು 0 ರನ್ ಗಳಿಸಿದ್ದರು. ಬಲ ತೊಡೆಯ ಸ್ನಾಯು ಸೆಳೆತದ (Low-grade Right Adductor Strain) ಕಾರಣ ಮಧ್ಯದ ಎರಡು ಪಂದ್ಯಗಳಿಂದಲೂ ಹೊರಗುಳಿದಿದ್ದರು.
ಆದರೆ 5ನೇ ಪಂದ್ಯದಲ್ಲಿ 2,000 ರನ್ಗಳ ಮೈಲಿಗಲ್ಲು ತಲುಪಲು ಅವರಿಗೆ 45 ರನ್ಗಳ ಅಗತ್ಯವಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಇಶಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಮಿಡ್ವಿಕೆಟ್ ಮೂಲಕ ಬೌಂಡರಿ ಬಾರಿಸಿದ ಇಶಾನ್, ನಂತರ ಸಿಕ್ಸರ್ ಸಿಡಿಸಿ ತಮ್ಮ 14ನೇ ಟಿ20 ಅರ್ಧಶತಕ ಪೂರೈಸಿದರು.
ಅಂತಿಮವಾಗಿ ಬ್ಲೇರ್ ಟಿಕ್ನರ್ ಬೌಲಿಂಗ್ನಲ್ಲಿ ನಾಥನ್ ಸ್ಮಿತ್ಗೆ ಕ್ಯಾಚ್ ನೀಡಿ ಔಟಾದರು. 32 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 61 ರನ್ ಗಳಿಸಿದರು.