ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ 
ಕ್ರಿಕೆಟ್

'ಕೊಹ್ಲಿ ಆಟದಲ್ಲಿ ತಪ್ಪು ಹುಡುಕುವುದೇ ಕಷ್ಟ': Virat Kohli ಬ್ಯಾಟಿಂಗ್‌ಗೆ ಮನಸೋತ ನ್ಯೂಜಿಲೆಂಡ್ ವೇಗಿ!

ಮಳೆ ಅಡ್ಡಿಪಡಿಸಿದ್ದ ಪಂದ್ಯದಲ್ಲಿ ಭಾರತಕ್ಕೆ 143 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಕೇವಲ 23.2 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಆಕ್ಲೆಂಡ್: ಟೀಂ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಭವಕ್ಕೆ ನ್ಯೂಜಿಲೆಂಡ್ ಆಟಗಾರರು ಮತ್ತೊಮ್ಮೆ ಮನಸೋತಿದ್ದು, ಅವರ ಬ್ಯಾಟಿಂಗ್ ನಲ್ಲಿ ತಪ್ಪು ಹುಡುಕುವುದೇ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಸಿಡಿಸಿದ ಸ್ಫೋಟಕ ಅರ್ಧಶತಕ ಭಾರತಕ್ಕೆ ಗೆಲುವು ತಂದುಕೊಟ್ಟಿದೆ. ಕೊಹ್ಲಿ ಆಟವನ್ನು ಹತ್ತಿರದಿಂದ ನೋಡಿರುವ ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ, ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಮಳೆ ಅಡ್ಡಿಪಡಿಸಿದ್ದ ಪಂದ್ಯದಲ್ಲಿ ಭಾರತಕ್ಕೆ 143 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಕೇವಲ 23.2 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 51 ಎಸೆತಗಳಲ್ಲಿ 74 ರನ್ ಸಿಡಿಸಿದ ಕೊಹ್ಲಿ, ತಮ್ಮ ಎಂದಿನ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡಿದರು.

ಎದುರಾಳಿಯಾಗಿ ಅವರ ಆಟ ನೋಡುವುದು ಕಿರಿಕಿರಿ

ಪಂದ್ಯದ ಬಳಿಕ ಮಾತನಾಡಿದ ನ್ಯೂಜಿಲೆಂಡ್ ವೇಗಿ ಜಾಕಬ್ ಡಫಿ, ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಅವರ ಆಟವನ್ನು ನೋಡುವುದು ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ ಅಲ್ಲವೇ?" ಎಂದು ತಮಾಷೆಯಾಗಿ ಮಾತು ಆರಂಭಿಸಿದ ಡಫಿ, "ಇಂತಹ ಸಣ್ಣ ಗುರಿ ಬೆನ್ನಟ್ಟುವಾಗ ವಿರಾಟ್ ಕೊಹ್ಲಿಯಂತಹ ಆಟಗಾರ ಕ್ರೀಸ್‌ಗೆ ಬಂದು ಆಕ್ರಮಣಕಾರಿ ಆಟವಾಡಿದರೆ ಪಂದ್ಯವನ್ನು ಬೇಗನೆ ಮುಗಿಸಬಹುದು. ಅವರು ಈ ಕೆಲಸವನ್ನು ಅದ್ಭುತವಾಗಿ ಮಾಡುತ್ತಾರೆ" ಎಂದಿದ್ದಾರೆ.

"ಬೌನ್ಸ್ ಎದುರಿಸಲು ಅವರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಹುಕ್ ಮತ್ತು ಪುಲ್ ಶಾಟ್‌ಗಳನ್ನು ಅದ್ಭುತವಾಗಿ ಆಡಿದರು. ಅಷ್ಟೇ ಅಲ್ಲ, ನೇರವಾಗಿ ಬೌಂಡರಿ ಬಾರಿಸುವ ಸಾಮರ್ಥ್ಯವೂ ಅವರಿಗಿದೆ. ಅವರು ಹಲವು ವರ್ಷಗಳಿಂದ ಹೀಗೆಯೇ ಆಡುತ್ತಿದ್ದಾರೆ. ಬೆಂಗಳೂರಿನಲ್ಲಿ ಆರ್‌ಸಿಬಿ ನೆಟ್ಸ್‌ನಲ್ಲಿ ಅವರ ಬ್ಯಾಟಿಂಗ್ ಎದುರಿಸುವ ಅವಕಾಶ ನನಗೂ ಸಿಕ್ಕಿತ್ತು. ಆಗಲೂ ಅವರು ನನಗೆ ಸಾಕಷ್ಟು ತೊಂದರೆ ಕೊಟ್ಟಿದ್ದರು" ಎಂದು ಡಫಿ ಹೇಳಿದ್ದಾರೆ.

ಕೊಹ್ಲಿ ಆಟದಲ್ಲಿ ತಪ್ಪು ಹುಡುಕುವುದೇ ಕಷ್ಟ!

ಕೊಹ್ಲಿ ಬ್ಯಾಟಿಂಗ್‌ನಲ್ಲಿ ಎದುರಾಳಿ ಬೌಲರ್‌ಗಳಿಗೆ ಹೆಚ್ಚು ಅವಕಾಶಗಳೇ ಸಿಗುವುದಿಲ್ಲ ಎಂದು ಡಫಿ ಅಭಿಪ್ರಾಯಪಟ್ಟಿದ್ದಾರೆ.

"ಬೆಂಗಳೂರಿನ ನೆಟ್ಸ್‌ನಲ್ಲಿ ಕೊಹ್ಲಿ ವಿರುದ್ಧ ಆಡಿದಾಗ ಅವರ ಆಟದ ಬಗ್ಗೆ ಕೆಲವು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಆದರೆ ಅವರ ಬ್ಯಾಟಿಂಗ್‌ನಲ್ಲಿ ಹೆಚ್ಚು ದೌರ್ಬಲ್ಯಗಳೇ ಇಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಸಣ್ಣ ಮೈದಾನಗಳಲ್ಲಿ ಬೌಲರ್‌ಗಳ ವೇಗವನ್ನೇ ಬಳಸಿಕೊಂಡು ಚೆಂಡನ್ನು ಬೌಂಡರಿಗೆ ಅಟ್ಟುತ್ತಾರೆ. ಬೇಕಾದರೆ ಚೆಂಡನ್ನು ಬೌಲರ್ ತಲೆಯ ಮೇಲಿಂದಲೂ ಸಿಕ್ಸರ್‌ಗೆ ಕಳುಹಿಸಬಲ್ಲರು. ನಿಜಕ್ಕೂ ಅವರ ಆಟದಲ್ಲಿ ಹೆಚ್ಚು ತಪ್ಪುಗಳನ್ನು ಹುಡುಕಲು ಸಾಧ್ಯವಿಲ್ಲ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಭಾರತ ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆಹಾಕುವ ಪರಿಸ್ಥಿತಿಯಲ್ಲಿದ್ದರೆ ಕೊಹ್ಲಿ ಇದೇ ರೀತಿಯ ಆಕ್ರಮಣಕಾರಿ ಆಟವಾಡುತ್ತಿದ್ದರೇ ಎಂಬುದನ್ನು ಕಾದು ನೋಡಬೇಕು ಎಂದೂ ಅವರು ಹೇಳಿದ್ದಾರೆ.

ಭಾರತದ ಬೌಲರ್‌ಗಳಿಗೂ ಡಫಿ ಮೆಚ್ಚುಗೆ

ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾತ್ರವಲ್ಲದೆ, ಭಾರತದ ಬೌಲರ್‌ಗಳ ಪ್ರದರ್ಶನವನ್ನೂ ಡಫಿ ಶ್ಲಾಘಿಸಿದ್ದಾರೆ. ವಿಶೇಷವಾಗಿ ಗುರ್ನೂರ್ ಬ್ರಾರ್ ಮತ್ತು ಅರ್ಷದೀಪ್ ಸಿಂಗ್ ಬೌಲಿಂಗ್ ಎದುರಿಸುವುದು ಕಷ್ಟವಾಗಿತ್ತು ಎಂದಿದ್ದಾರೆ.

ಆರು ಅಡಿ ಐದು ಇಂಚು ಎತ್ತರದ ಗುರ್ನೂರ್ ಬ್ರಾರ್, ತಮ್ಮ ವೇಗ ಮತ್ತು ಹೆಚ್ಚುವರಿ ಬೌನ್ಸ್ ಮೂಲಕ ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ಕಾಡಿದರು. ಅವರು 44 ರನ್ ನೀಡಿ ಮೂರು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ 70 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಪರಿಣಾಮ ನ್ಯೂಜಿಲೆಂಡ್ ತಂಡ 40.2 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು.

"ಈಡನ್ ಪಾರ್ಕ್‌ನಲ್ಲಿ 180 ರನ್‌ಗಳ ಮೊತ್ತ ಸಾಕಾಗುವುದಿಲ್ಲ. ಭಾರತದ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಅವರ ತಂಡದಲ್ಲಿ ಎತ್ತರದ ವೇಗದ ಬೌಲರ್‌ಗಳಿದ್ದು, ಪಿಚ್‌ನ ಬೌನ್ಸ್ ಅನ್ನು ಚೆನ್ನಾಗಿ ಬಳಸಿಕೊಂಡರು. ನಾವು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 180 ರನ್‌ಗಳನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗಿತ್ತು" ಎಂದು ಡಫಿ ಹೇಳಿದ್ದಾರೆ.

ಮೇಲುಗೈ ಸಾಧಿಸಿದ ಹೊರತಾಗಿಯೂ ಪಂದ್ಯ ಕೈತಪ್ಪಿತು

ಭಾರತದ ಗೆಲುವಿನ ಹಾದಿಯಲ್ಲಿ ಐದು ವಿಕೆಟ್‌ಗಳು ಬಿದ್ದಿದ್ದರೂ, ಅಷ್ಟರಲ್ಲಾಗಲೇ ಪಂದ್ಯ ಕೈತಪ್ಪಿತ್ತು ಎಂದು ಡಫಿ ಒಪ್ಪಿಕೊಂಡಿದ್ದಾರೆ. ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಹೋರಾಟ ಮುಂದುವರಿಸಲಿದೆ. ಭಾರತದ ವಿರುದ್ಧ ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ ಎಂದೂ ತಿಳಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಮಾಡುವುದರ ಪ್ರಭಾವದ ಬಗ್ಗೆಯೂ ಮಾತನಾಡಿದ ಡಫಿ, ಪಿಚ್‌ನ ತೇವಾಂಶ ಮತ್ತು ಹವಾಮಾನ ಪರಿಸ್ಥಿತಿಗಳು ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದಿದ್ದಾರೆ. ಮಳೆಯಿಂದಾಗಿ ಪಿಚ್‌ನಲ್ಲಿ ತೇವಾಂಶ ಹೆಚ್ಚಾಗಿ, ಚೆಂಡು ಬ್ಯಾಟ್‌ಗೆ ವೇಗವಾಗಿ ಬರಲು ನೆರವಾಯಿತು. ಹೀಗಾಗಿ ಭಾರತ ಸುಲಭವಾಗಿ ರನ್ ಗಳಿಸಲು ಸಾಧ್ಯವಾಯಿತು ಎಂದು ವಿಶ್ಲೇಷಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ನ್ಯೂಜಿಲೆಂಡ್ ಆಟಗಾರರು ಭಾರತದ ಬೌಲಿಂಗ್ ಎದುರಿಸಲು ಸೂಕ್ತವಾಗಿ ಹೊಂದಿಕೊಳ್ಳಲಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಲಿದ್ದೇವೆ ಎಂದು ಡಫಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೆಎಂಎಫ್‌ನಿಂದ ಮತ್ತೊಂದು ಬೆಲೆ ಏರಿಕೆ ಬಿಸಿ: ಹಾಲು, ಮೊಸರಿನ ನಂತರ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ!

ದೆಹಲಿಯಲ್ಲಿ ಭೀಕರ ದುರಂತ: ನಿರ್ಮಾಣ ಹಂತದ 3 ಅಂತಸ್ತಿನ ಕಟ್ಟಡ ಕುಸಿತ; ಇಬ್ಬರ ಸಾವು, 15ಕ್ಕೂ ಹೆಚ್ಚು ಜನ ಸಿಲುಕಿರುವ ಆತಂಕ..!

'ಕೊಹ್ಲಿ ಅಲ್ಲ, ರೋಹಿತ್ ಶರ್ಮಾ ಅಲ್ಲವೇ ಅಲ್ಲ'; 'ಅವನ ದಾಖಲೆಗಳೇ ಎಲ್ಲವನ್ನೂ ಹೇಳುತ್ತವೆ': ಯುವ ಆಟಗಾರನ ಕುರಿತು Ajinkya Rahane ಮೆಚ್ಚುಗೆ!

IPL: 'ಹಾರ್ದಿಕ್ ಪಾಂಡ್ಯ ಮೂಲೆಗುಂಪಾಗಿದ್ದೇನೆ ಎಂದು ಭಾವಿಸಿದ್ದರು': ಮುಂಬೈ ಇಂಡಿಯನ್ಸ್ ನಾಯಕನ ಭವಿಷ್ಯದ ಬಗ್ಗೆ CSK ಮಾಜಿ ಆಟಗಾರನ ಸ್ಫೋಟಕ ಹೇಳಿಕೆ!

ಪುರಿ ಜಗನ್ನಾಥ ಆಯ್ತು, ಈಗ ಹಾಸನಾಂಬೆ ಸರದಿ; 'ವರ್ಷವಾದರೂ ದೀಪ ಆರಿಲ್ಲ, ಹಣ್ಣು ಕೊಳೆತಿಲ್ಲ! ದೇವಾಲಯದ ಪವಾಡ ಪ್ರಶ್ನಿಸಿದ RJ ಪೃಥ್ವಿ