ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಮಳೆ ಕಾರಣದಿಂದ ಮೊಟಕಾಯಿತಾದರೂ ಅಭಿಮಾನಿಗಳಿಗೆ ಮಾತ್ರ ಮನರಂಜನೆ ಮಾತ್ರ ಕಡಿಮೆ ಇರಲಿಲ್ಲ.
ಒಂದು ಕಡೆ ವಿರಾಟ್ ಕೊಹ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಎದುರಾಳಿಗಳ ಕಂಗೆಡಿಸಿದರೆ ಮತ್ತೊಂದೆಡೆ ಅಂಪೈರ್ ಮಾಡಿದ ಕೀಟಲೆಯೊಂದು ಅಭಿಮಾನಿಗಳು ಮತ್ತು ಕಮೆಂಟೇಟರ್ಸ್ ಬಿದ್ದು ಬಿದ್ದು ನಗುವಂತೆ ಮಾಡಿದೆ.
ಆಕ್ಲೆಂಡ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ನಡೆದ ಕೊಹ್ಲಿ ಅವರ ಪುಟ್ಟ ವಾಚ್ ಹುಡುಕಾಟದ ಪ್ರಸಂಗವೊಂದು ಎಲ್ಲರ ಮುಖದಲ್ಲಿ ನಗು ಮೂಡಿಸಿದೆ. ಕೊಹ್ಲಿಯ ವರ್ತನೆ ಕಂಡು ಕಾಮೆಂಟೇಟರ್ಸ್ ಕೂಡ ನಗುವನ್ನು ತಡೆಯಲಾಗದೆ ಬಿದ್ದುಬಿದ್ದು ನಕ್ಕಿದ್ದಾರೆ.
ಆಗಿದ್ದೇನು?
ಪಂದ್ಯದ ವೇಳೆ ಕೊಹ್ಲಿ ಕೈಯಲ್ಲಿದ್ದ ವಾಚ್‌ನ ಒಂದು ಸಣ್ಣ ಭಾಗ ಆಕಸ್ಮಿಕವಾಗಿ ಕಳಚಿ ಬಿದ್ದಿತ್ತು. ಇದನ್ನು ಗಮನಿಸಿದ ಕೊಹ್ಲಿ ತಕ್ಷಣವೇ ಮೈದಾನದಲ್ಲಿ ಆ ವಸ್ತುವನ್ನು ಹುಡುಕಲು ಶುರುಮಾಡಿದ್ದಾರೆ. ಅತ್ತಿತ್ತ ನೋಡುತ್ತಾ ಹುಡುಕಿದರೂ ಅದು ಅವರಿಗೆ ಸಿಕ್ಕಿರಲಿಲ್ಲ.
ಈ ವೇಳೆ ಕೊಹ್ಲಿ ಏನನ್ನೋ ಹುಡುಕುತ್ತಿರುವುದನ್ನು ಗಮನಿಸಿದ ಅಂಪೈರ್ ಹಿಂದಿನಿಂದ ಬಂದು, ಏನು ಹುಡುಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಆರಂಭದಲ್ಲಿ ಕೊಹ್ಲಿ, 'ಅದನ್ನು ಬಿಡಿ ಸರ್' ಎಂದು ಉತ್ತರಿಸಿದ್ದಾರೆ. ಆದರೆ, ಅಷ್ಟರಲ್ಲಿ ಅಂಪೈರ್ ತಾವು ಕೊಹ್ಲಿಯ ವಾಚ್‌ನಿಂದ ಕಳಚಿದ್ದ ಭಾಗವನ್ನು ಕಂಡುಕೊಂಡಿರುವುದಾಗಿ ತಿಳಿಸಿದ್ದಾರೆ.
ಅರ್ಧಶತಕ ಸಿಡಿಸಿದ್ದಕ್ಕಿಂತ ಹೆಚ್ಚು ಸಂಭ್ರಮಿಸಿದ ಕೊಹ್ಲಿ
ಕಾಣೆಯಾಗಿದ್ದ ವಾಚ್‌ನ ಭಾಗ ಸಿಕ್ಕಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಕೊಹ್ಲಿ ಮುಖದಲ್ಲಿ ಸಂತಸ ಮೂಡಿತ್ತು. ಈ ವೇಳೆ ಅವರ ಈ ಪ್ರತಿಕ್ರಿಯೆ ಕಂಡು ಕಾಮೆಂಟೇಟರ್ಸ್ ಜೋರಾಗಿ ನಕ್ಕಿದ್ದಾರೆ. ಅಷ್ಟೇ ಅಲ್ಲ, ಅರ್ಧಶತಕ ಬಾರಿಸಿದಾಗಲೂ ಕಾಣದಷ್ಟು ಖುಷಿ ವಾಚ್‌ನ ಸಣ್ಣ ಭಾಗ ಸಿಕ್ಕಾಗ ಕೊಹ್ಲಿ ಮುಖದಲ್ಲಿ ಕಾಣಿಸಿಕೊಂಡಿದೆ ಎಂದು ಅಭಿಮಾನಿಗಳು ಈ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.
ಕೊಹ್ಲಿ ವಾಚ್ ಹಿಂದಿದೆ ವಿಶೇಷ ಕಾರಣ!
ವಿರಾಟ್ ಕೊಹ್ಲಿಗೆ ಈ ವಾಚ್ ಮೇಲೆ ವಿಶೇಷ ಅಭಿಮಾನವಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಈ ವಾಚ್ ಅನ್ನು ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಉಡುಗೊರೆಯಾಗಿ ನೀಡಿದ್ದರಂತೆ. ಹೀಗಾಗಿ ವಾಚ್‌ನ ಒಂದು ಸಣ್ಣ ಭಾಗ ಕಳೆದುಹೋದರೂ ಕೊಹ್ಲಿ ಅಷ್ಟೊಂದು ಕಾಳಜಿ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಮೈದಾನದಲ್ಲಿ ಸದಾ ಗಂಭೀರವಾಗಿ ಕಾಣಿಸಿಕೊಳ್ಳುವ ಕೊಹ್ಲಿಯ ತುಂಟತನದ ಮತ್ತೊಂದು ಮುಖವನ್ನು ಈ ಘಟನೆ ಅಭಿಮಾನಿಗಳಿಗೆ ತೋರಿಸಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ಕೊಹ್ಲಿಯ ಮುದ್ದಾದ ಪ್ರತಿಕ್ರಿಯೆಗೆ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.