ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಮತ್ತೆ ಕೈಕೊಟ್ಟಿದ್ದು, ಟೀಂ ಇಂಡಿಯಾ 209 ರನ್ ಗಳಿಗೆ ಆಲೌಟ್ ಆಗಿದೆ.
ಭಾನುವಾರ ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಅದರಂತೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ 42.1 ಓವರ್ ನಲ್ಲಿ 209 ರನ್ ಗಳಿಸಿ ಆಲೌಟ್ ಆಗಿದೆ.
ಆ ಮೂಲಕ ನ್ಯೂಜಿಲೆಂಡ್ ಗೆ ಗೆಲ್ಲಲು 210 ರನ್ ಗಳ ಸಾಧಾರಣ ಗುರಿ ನೀಡಿದೆ.
ಮತ್ತೆ ಕೈಕೊಟ್ಟ ಟಾಪ್ ಆರ್ಡರ್
ಇಂದಿನ ಪಂದ್ಯದಲ್ಲೂ ಭಾರತ ತಂಡದ ಟಾಪ್ ಆರ್ಡರ್ ಕೈಕೊಟ್ಟಿತು. ರೋಹಿತ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಉತ್ತಮ ಇನ್ನಿಂಗ್ಸ್ ಆಡುವ ಮುನ್ಸೂಚನೆ ನೀಡಿದರಾದರೂ, ಕಿವೀಸ್ ಪ್ರಬಲ ಬೌಲಿಂಗ್ ಎದುರು ಮಂಕಾದರು.
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಕೇವಲ 7 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಆಸರೆಯಾದ ಅಕ್ಷರ್ ಪಟೇಲ್, ಇಶಾನ್ ಕಿಶನ್
ಆರಂಭಿಕ ಆಘಾತದಿಂದ ಭಾರತ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲೂ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ತಲಾ 46 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಶ್ರೇಯಸ್ ಅಯ್ಯರ್ ಹಾಗೂ ನಮನ್ ಧೀರ್ ತಲಾ 22 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಹೀಗಾಗಿ ಭಾರತ 209 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಕೊನೆಯಲ್ಲಿ ಅರ್ಷದೀಪ್, ಸಿರಾಜ್ ಅಬ್ಬರ
ಭಾರತ 200 ರನ್‌ಗಳ ಗಡಿಯನ್ನೂ ತಲುಪುವುದು ಕಷ್ಟವೆನಿಸಿದ್ದ ಸಂದರ್ಭದಲ್ಲಿ ಕೆಳಕ್ರಮಾಂಕದ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಸಿಡಿದಾಡಿದರು. ಅರ್ಷದೀಪ್ ಜೇಕಬ್ ಡಫಿ ಅವರ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿ ಗಮನ ಸೆಳೆದರು.
ಇನ್ನು ಸ್ಯಾಂಟ್ನರ್ ಬೌಲಿಂಗ್‌ನಲ್ಲೂ ಸಿರಾಜ್ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ 12 ರನ್ ಕಲೆಹಾಕಿದರು. ಅರ್ಷದೀಪ್ 14 ರನ್ ಗಳಿಸಿದರೆ, ಸಿರಾಜ್ 14 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಜೋಡಿಯ ಸಣ್ಣ ಹೋರಾಟದಿಂದ ಭಾರತ 200 ರನ್‌ಗಳ ಗಡಿ ದಾಟಿತು.
ಸ್ಯಾಂಟ್ನರ್, ಡಫಿಗೆ ತಲಾ ಮೂರು ವಿಕೆಟ್
ನ್ಯೂಜಿಲೆಂಡ್ ಪರ ನಾಯಕ ಮಿಚೆಲ್ ಸ್ಯಾಂಟ್ನರ್ ಮತ್ತು ಜೇಕಬ್ ಡಫಿ ತಲಾ ಮೂರು ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಮ್ಯಾಥ್ಯೂ ಫಿಶರ್ ಎರಡು ವಿಕೆಟ್ ಕಬಳಿಸಿದರು. ಸ್ಯಾಂಟ್ನರ್ 47 ರನ್ ನೀಡಿ ಮೂರು ವಿಕೆಟ್ ಪಡೆದರು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಹೊಂದಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಸರಣಿಯಲ್ಲಿ ಸೋಲು ತಪ್ಪಿಸಿ ಗೆಲುವು ಸಾಧಿಸಲು ನ್ಯೂಜಿಲೆಂಡ್ 210 ರನ್ ಗಳಿಸಬೇಕಿದೆ.