ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

'ಎಲ್ರಿಗೂ ಆ ಧೈರ್ಯ ಬರಲ್ಲ'; ಮೊಹಮ್ಮದ್ ಸಿರಾಜ್‌ಗೆ ಮತ್ತೆ ಕೊಕ್, ಗಂಭೀರ್, ಗಿಲ್ ನಿರ್ಧಾರಕ್ಕೆ ವಾಸಿಂ ಜಾಫರ್ ಮೆಚ್ಚುಗೆ! 7 ವರ್ಷಗಳ ದಾಖಲೆ ಕೊನೆಗೂ ಅಂತ್ಯ

ಮೊದಲ ಟೆಸ್ಟ್ ಪಂದ್ಯದಲ್ಲೂ ಸಿರಾಜ್ ಅವರಿಗೆ ಅವಕಾಶ ನೀಡದಿರುವುದು ಭಾರತದ ಗೆಲುವಿನ ಮೇಲೆ ಪರಿಣಾಮ ಬೀರಿದೆ ಎಂಬ ಅಭಿಪ್ರಾಯವನ್ನು ಹಲವು ಕ್ರಿಕೆಟ್ ವಿಶ್ಲೇಷಕರು ವ್ಯಕ್ತಪಡಿಸಿದ್ದರು.

ಮಹಮದ್ ಸಿರಾಜ್ ಮತ್ತು ಶುಭ್ ಮನ್ ಗಿಲ್
Srinivasa Murthy VN
Updated On : 28 Nov 2026, 9:07 am

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಿರಾಜ್ ಅವರನ್ನು ತಂಡದಿಂದ ಹೊರಗಿಟ್ಟಿರುವ ನಾಯಕ ಶುಭಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಿರ್ಧಾರಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಮಾತ್ರ ಈ ನಿರ್ಧಾರದ ಹಿಂದೆ ಇರುವ ಗಟ್ಟಿ ನಿಲುವನ್ನು ಮೆಚ್ಚಿಕೊಂಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲೂ ಸಿರಾಜ್ ಅವರಿಗೆ ಅವಕಾಶ ನೀಡದಿರುವುದು ಭಾರತದ ಗೆಲುವಿನ ಮೇಲೆ ಪರಿಣಾಮ ಬೀರಿದೆ ಎಂಬ ಅಭಿಪ್ರಾಯವನ್ನು ಹಲವು ಕ್ರಿಕೆಟ್ ವಿಶ್ಲೇಷಕರು ವ್ಯಕ್ತಪಡಿಸಿದ್ದರು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲೂ 32 ವರ್ಷದ ವೇಗಿಯನ್ನು ಕೈಬಿಟ್ಟಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

Advertisement

Advertisement

ಈ ಬೆಳವಣಿಗೆಯ ನಡುವೆಯೇ ವಾಸಿಂ ಜಾಫರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಗೌತಮ್ ಗಂಭೀರ್ ಮತ್ತು ಶುಭಮನ್ ಗಿಲ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಗಂಭೀರ್, ಗಿಲ್ ನಿರ್ಧಾರಕ್ಕೆ ಜಾಫರ್ ಮೆಚ್ಚುಗೆ

"ನಿರ್ಧಾರ ತೆಗೆದುಕೊಳ್ಳುವವರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರೂ ಸಿರಾಜ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರು ಎಂದು ಭಾವಿಸಿರುವಂತಿದೆ. ಆದರೆ, ಹೆಚ್ಚುತ್ತಿರುವ ಒತ್ತಡ ಮತ್ತು ವ್ಯಾಪಕ ವಿರೋಧದ ನಡುವೆಯೂ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿರುವವರಿಗೆ ಮೆಚ್ಚುಗೆ ಸಲ್ಲಬೇಕು.

ಬಹುತೇಕ ಎಲ್ಲರೂ ವಿರುದ್ಧ ಅಭಿಪ್ರಾಯ ಹೊಂದಿರುವಾಗಲೂ ತಮ್ಮ ನಿಲುವಿಗೆ ಬದ್ಧವಾಗಿರಲು ದೊಡ್ಡ ಧೈರ್ಯ ಬೇಕು. ಎಲ್ಲರಿಗೂ ಆ ಧೈರ್ಯ ಇರುವುದಿಲ್ಲ" ಎಂದು ವಾಸಿಂ ಜಾಫರ್ ಪೋಸ್ಟ್ ಮಾಡಿದ್ದಾರೆ.

ಈ ಮೂಲಕ ಸಿರಾಜ್ ಅವರನ್ನು ಕೈಬಿಟ್ಟಿರುವ ನಿರ್ಧಾರವನ್ನು ನೇರವಾಗಿ ಪ್ರಶ್ನಿಸುವ ಬದಲು, ಟೀಕೆಗಳ ನಡುವೆಯೂ ತಮ್ಮ ಆಯ್ಕೆಗೆ ಬದ್ಧವಾಗಿರುವ ಗಂಭೀರ್ ಮತ್ತು ಗಿಲ್ ಅವರ ಆತ್ಮವಿಶ್ವಾಸವನ್ನು ಜಾಫರ್ ಶ್ಲಾಘಿಸಿದ್ದಾರೆ.

ಏಳು ವರ್ಷಗಳ ದಾಖಲೆ ಅಂತ್ಯ

ಎರಡನೇ ಟೆಸ್ಟ್ ಪಂದ್ಯದಿಂದಲೂ ಸಿರಾಜ್ ಹೊರಗುಳಿದಿರುವುದು ಅವರ ಏಳು ವರ್ಷಗಳ ಸುದೀರ್ಘ ದಾಖಲೆಗೆ ಅಂತ್ಯ ಹಾಡಿದೆ. ಭಾರತದ ಪರ ವಿದೇಶಿ ನೆಲದಲ್ಲಿ ನಡೆದ ಪ್ರತಿ ಟೆಸ್ಟ್ ಸರಣಿಯಲ್ಲೂ ಕನಿಷ್ಠ ಒಂದು ಪಂದ್ಯವನ್ನಾದರೂ ಆಡುತ್ತಿದ್ದ ಸಿರಾಜ್, ಇದೇ ಮೊದಲ ಬಾರಿಗೆ ಆ ಅವಕಾಶ ಕಳೆದುಕೊಂಡಿದ್ದಾರೆ.

ಸಿರಾಜ್ ಅವರ ಅನುಪಸ್ಥಿತಿ ಮತ್ತು ತಂಡದ ಆಯ್ಕೆ ನಿರ್ಧಾರ ಮುಂದಿನ ಪಂದ್ಯಗಳಲ್ಲೂ ಕ್ರಿಕೆಟ್ ಅಭಿಮಾನಿಗಳ ಚರ್ಚೆಯ ವಿಷಯವಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement