ಪಾಕ್ ಆಟಗಾರನ ಕಾಡಿದ ಅಭಿಮಾನಿಗಳು 
ಕ್ರಿಕೆಟ್

Asian Games 2026: 'ನೀನ್ ಕ್ಯಾಚ್ ಬಿಡು, ನಾವ್ ನೀರು ಬಿಡ್ತೀವಿ': ಫೀಲ್ಡಿಂಗ್ ಮಾಡುತ್ತಿದ್ದ ಪಾಕ್ ಬೌಲರ್ ಗೆ ಅಭಿಮಾನಿಗಳ ಕಾಟ! Video

ಈ ಪಂದ್ಯದಲ್ಲಿ ಎರಡು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ ಪಾಕಿಸ್ತಾನದ ಬ್ಯಾಟರ್ ಸೈಮ್ ಅಯೂಬ್ ಇದೀಗ ಮೈದಾನದ ಹೊರಗೂ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.

ನಿಸ್ಶಿನ್: ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 19 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

ಆದರೆ ಪಂದ್ಯದ ವೇಳೆ ಪಾಕಿಸ್ತಾನದ ಸ್ಟಾರ್ ಆಟಗಾರ ಸ್ಯಾಮ್ ಆಯುಬ್ ಗೆ ಅಭಿಮಾನಿಗಳು ಕಾಟ ಕೊಟ್ಟ ಘಟನೆ ವರದಿಯಾಗಿದೆ. ಈ ಪಂದ್ಯದಲ್ಲಿ ಎರಡು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ ಪಾಕಿಸ್ತಾನದ ಬ್ಯಾಟರ್ ಸೈಮ್ ಅಯೂಬ್ ಇದೀಗ ಮೈದಾನದ ಹೊರಗೂ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.

ಇಂದು ಅಂದರೆ ಅಕ್ಟೋಬರ್ 3ರಂದು ನಿಸ್ಶಿನ್‌ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 211/6 ರನ್ ಗಳಿಸಿತು. ಅಭಿಷೇಕ್ ಶರ್ಮಾ 61 ಹಾಗೂ ತಿಲಕ್ ವರ್ಮಾ 51 ರನ್‌ಗಳ ಅರ್ಧಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು.

ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 192/6 ರನ್‌ಗಳಿಗೆ ಸೀಮಿತವಾಯಿತು. ಹಸನ್ ನವಾಜ್ 96 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೂ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಸೈಮ್ ಅಯೂಬ್ ಕೂಡ 22 ಎಸೆತಗಳಲ್ಲಿ 29 ರನ್ ಗಳಿಸಿದರು.

ಎರಡು ಕ್ಯಾಚ್ ಕೈಚೆಲ್ಲಿದ ಸೈಮ್ ಅಯೂಬ್

ಇನ್ನು ಪಾಕಿಸ್ತಾನದ ಫೀಲ್ಡಿಂಗ್ ವೇಳೆ ಸೈಮ್ ಅಯೂಬ್ ಎರಡು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಮೊದಲಿಗೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಕ್ಯಾಚ್ ಕೈಬಿಟ್ಟ ಅವರು, ಬಳಿಕ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಕ್ಯಾಚ್‌ನ್ನೂ ಕೈಚೆಲ್ಲಿದರು.

ಈ ಜೀವದಾನಗಳನ್ನು ಸದುಪಯೋಗಪಡಿಸಿಕೊಂಡ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಜೊತೆಗೂಡಿ ಭಾರತದ ಇನ್ನಿಂಗ್ಸ್‌ಗೆ ಬಲ ತುಂಬಿದರು. ಪ್ರಮುಖ ಹಂತದಲ್ಲಿ ಬಂದ ಈ ತಪ್ಪುಗಳು ಪಾಕಿಸ್ತಾನಕ್ಕೆ ದುಬಾರಿಯಾಗಿ ಪರಿಣಮಿಸಿದವು.

'ನೀನ್ ಕ್ಯಾಚ್ ಬಿಡು, ನಾವ್ ನೀರು ಬಿಡ್ತೀವಿ'

ಸೈಮ್ ಅಯೂಬ್ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಭಾರತೀಯ ಅಭಿಮಾನಿಗಳ ಒಂದು ಗುಂಪು ಅವರನ್ನು ಗುರಿಯಾಗಿಸಿಕೊಂಡು ಸ್ಲೆಡ್ಜಿಂಗ್ ಮಾಡಿರುವುದು ಕಂಡುಬಂದಿದೆ. ‘ಕೋಯಿ ಗಾರ್ಡನ್ ಮೇ ನಹೀಂ ಘೂಮೇಗಾ’ ಎಂಬ ಘೋಷಣೆಗಳ ಜತೆಗೆ ‘ಏಕ್ ಔರ್ ಕ್ಯಾಚ್ ಡ್ರಾಪ್ ಕರ್ನಾ’ (ಇನ್ನೊಂದು ಕ್ಯಾಚ್ ಬಿಡು) ಎಂದು ಅಭಿಮಾನಿಗಳು ಕೂಗಿದ್ದಾರೆ.

ಅಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಿಂಧೂ ನದಿ ಒಪ್ಪಂದದ ಕುರಿತು ವ್ಯಂಗ್ಯ ಮಾಡಿರುವ ಅಭಿಮಾನಿಗಳು, ನೀನು ಕ್ಯಾಚ್ ಬಿಡು.. ನಾವು ನೀರು ಬಿಡುತ್ತೇವೆ ಎಂದು ಹೇಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇನ್ನು ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳಾದ ಅಕ್ಷರ್ ಪಟೇಲ್ (2/29), ವಾಷಿಂಗ್ಟನ್ ಸುಂದರ್ (2/29) ಹಾಗೂ ಶಿವಂ ದುಬೆ (2/33) ತಲಾ ಎರಡು ವಿಕೆಟ್ ಪಡೆದು ಪಾಕಿಸ್ತಾನದ ರನ್‌ಚೇಸ್‌ಗೆ ಕಡಿವಾಣ ಹಾಕಿದರು. ಈ ಗೆಲುವಿನೊಂದಿಗೆ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಚಿನ್ನದ ಪದಕವನ್ನು ಉಳಿಸಿಕೊಂಡಿದೆ. ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 19ಕ್ಕೆ ಏರಿದ್ದು, ಒಟ್ಟಾರೆ ಪದಕಗಳ ಸಂಖ್ಯೆ 81ಕ್ಕೆ ತಲುಪಿದೆ.

ಅಂದಹಾಗೆ ಪೆಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಸರ್ಕಾರ ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಿ ಪಾಕ್ ಗೆ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಪಾಕಿಸ್ತಾನ ಭಾರತಕ್ಕೆ ನೀರು ಬಿಡುವಂತೆ ಆಗ್ರಹಿಸುತ್ತಿದ್ದು, ಈ ಸಂಬಂಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶ್ನಿಸುತ್ತಲೇ ಇದೆ. ಇದೇ ವಿಚಾರ ಕ್ರಿಕೆಟ್ ನಲ್ಲೂ ಭಾರಿ ಸುದ್ದಿಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!

'ಅಸಹ್ಯ, ವಿಕೃತ, ನಾಚಿಕೆಗೇಡು.. ಕ್ಷಮಿಸೋ ಮಾತೇ ಇಲ್ಲ.. ಕಾನೂನು ಕ್ರಮ ಖಂಡಿತ': ನಟ Jr NTR ಕೆಂಡಾಮಂಡಲ, ಆಗಿದ್ದೇನು?

ಮಹತ್ವದ ಬೆಳವಣಿಗೆಯಲ್ಲಿ ಆಪ್ ಮಾಜಿ ವಕ್ತಾರೆ ಪ್ರಿಯಾಂಕಾ, ಮಾಜಿ ಶಾಸಕ ಶ್ಯಾಮ್ ಸುಂದರ್ ಸೇರಿ ಹಲವು ನಾಯಕರು ಕಾಂಗ್ರೆಸ್‌ ಸೇರ್ಪಡೆ!