ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ಅಭಿಷೇಕ್ ಶರ್ಮಾರನ್ನು ಗುರು ಯುವರಾಜ್ ಸಿಂಗ್ ಕಾಲೆಳೆದಿದ್ದು, ಸೆಂಚುರಿ ಸಿಡಿಸಿದವನಿಗೆ ಅರ್ಧಶತಕ ಸಿಡಿಸಲಾಗಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇಂದು ವೆಲ್ಲಿಂಗ್ಟನ್ ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಬಳಿಕ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದರು. ಈ ಅಮೋಘ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ಭಾರತ ಆರು ವಿಕೆಟ್‌ಗಳ ಗೆಲುವು ದಾಖಲಿಸಿತು.
ಅಭಿಷೇಕ್ ಅವರ ಶತಕದ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮಾಷೆಯ ಪೋಸ್ಟ್ ಹಂಚಿಕೊಂಡಿದ್ದಾರೆ.
ಯುವಿ ಹೇಳಿದ್ದೇನು?
“ನಿನಗೆ ಇನ್ನೂ 12 ಎಸೆತಗಳಲ್ಲಿ 50 ರನ್ ಗಳಿಸಲು ಆಗುತ್ತಿಲ್ಲ ಅಲ್ವಾ, ಅಭಿಷೇಕ್? ಇಬ್ಬರು ಎಡಗೈ ಬ್ಯಾಟರ್‌ಗಳು ತಮ್ಮ ಮನೆಯ ಅಂಗಳದಲ್ಲಿ ಆಡುತ್ತಿರುವಂತಿದೆ!” ಎಂದು ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ.
ಅಲ್ಲದೆ ಮತ್ತೊಂದು ಟ್ವೀಟ್`ನಲ್ಲಿ ಅಭಿಷೇಕ್ ಶತಕದಾಟವನ್ನು ಕೊಂಡಾಡಿರುವ ಯುವಿ, '“ನನಗೂ 30 ಅಥವಾ 34 ಎಸೆತಗಳಲ್ಲಿ 100 ರನ್ ಗಳಿಸಲು ಸಾಧ್ಯವಿಲ್ಲ! ಚೆನ್ನಾಗಿ ಆಡಿದ್ದೀರಿ ಅಭಿಷೇಕ್ ಶರ್ಮಾ! ಅದ್ಭುತ ಇನಿಂಗ್ಸ್. ಜೊತೆಗೆ ಸಿಂಗಲ್ಸ್ ಕೂಡ ತೆಗೆದುಕೊಂಡಿದ್ದೀರಿ! ವೈಭವ್ ಸೂರ್ಯವಂಶಿ ಕೂಡ ಮತ್ತೊಂದು ತುದಿಯಲ್ಲಿ ಉತ್ತಮವಾಗಿ ಆಡಿದ್ದಾರೆ. ಈ ಜೋಡಿ ಎದುರಾಳಿಗಳನ್ನು ಧ್ವಂಸ ಮಾಡುವಂಥದ್ದು! ಎಂದು ಹೊಗಳಿದ್ದಾರೆ.
ಅಂತೆಯೇ 'ಸಂಜು ಸ್ಯಾಮ್ಸನ್ ಅವರಿಗೆ ವಿಶೇಷ ಮೆಚ್ಚುಗೆ. ತಂಡದ ಹಿತದೃಷ್ಟಿಯಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ನಿಜವಾದ ತಂಡದ ಆಟಗಾರ! 200 ರನ್‌ಗಳ ಗಡಿ ದಾಟದಂತೆ ಎದುರಾಳಿ ತಂಡವನ್ನು ನಿಯಂತ್ರಿಸಿದ ನಮ್ಮ ಬೌಲರ್‌ಗಳಿಗೂ ಅಭಿನಂದನೆಗಳು. ಸರಣಿಯಲ್ಲಿ ಅದ್ಭುತ ಗೆಲುವು! ಟೀಮ್ ಇಂಡಿಯಾಗೆ ಅಭಿನಂದನೆಗಳು! ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಯುವಿ
2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿ ಇತಿಹಾಸ ನಿರ್ಮಿಸಿದ್ದರು.
ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಅವರು, ಭಾರತದ ಪರ ಅತಿ ವೇಗದ ಟಿ20 ಅಂತಾರಾಷ್ಟ್ರೀಯ ಅರ್ಧಶತಕದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು.
ಯುವರಾಜ್ ಅವರ ಶಿಷ್ಯನಾಗಿರುವ ಅಭಿಷೇಕ್, ಆ ದಾಖಲೆಯ ಸಮೀಪಕ್ಕೆ ಬಂದರೂ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದರೆ, ನಂತರದ ಸ್ಫೋಟಕ ಬ್ಯಾಟಿಂಗ್‌ನಿಂದ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದರು.