ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಇತ್ತೀಚೆಗೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ದಂತಕಥೆ ವಿಕೆಟ್ ಕೀಪರ್-ಬ್ಯಾಟರ್ ಎಂಎಸ್ ಧೋನಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. 154 ಐಪಿಎಲ್ ಪಂದ್ಯಗಳನ್ನು ಆಡಿರುವ ಮತ್ತು 4,773 ರನ್ ಗಳಿಸಿರುವ ಡು ಪ್ಲೆಸಿಸ್, 2022ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ತೆರಳುವ ಮೊದಲು ಸಿಎಸ್‌ಕೆ ಜೊತೆ ಒಂಬತ್ತು ಆವೃತ್ತಿಗಳನ್ನು ಕಳೆದಿದ್ದರು. ಚೆನ್ನೈ ಮೂಲದ ಫ್ರಾಂಚೈಸಿಯೊಂದಿಗಿನ ಅವರ ಅವಧಿಯಲ್ಲಿ, ಅವರು ಮೂರು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದರು ಮತ್ತು ಧೋನಿ ನಾಯಕತ್ವದಲ್ಲಿ ಗಮನಾರ್ಹ ಯಶಸ್ಸನ್ನು ಕಂಡರು.
'ಪ್ರಖರ್ ಗುಪ್ತಾ ಪಾಡ್‌ಕಾಸ್ಟ್'ನಲ್ಲಿ ಮಾತನಾಡಿದ ಡು ಪ್ಲೆಸಿಸ್, ಧೋನಿ ಪಂದ್ಯಕ್ಕೂ ಮುನ್ನ ರೂಪಿಸಿದ ಯೋಜನೆಗಳನ್ನು ಅಪರೂಪವಾಗಿಯೇ ಅವಲಂಬಿಸುತ್ತಿದ್ದರು. ಬದಲಾಗಿ, ಅವರು ತಮ್ಮ ಅಂತಃಪ್ರಜ್ಞೆಯನ್ನು (instincts) ನಂಬಲು ಮತ್ತು ಮೈದಾನದಲ್ಲಿನ ಸನ್ನಿವೇಶಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಆದ್ಯತೆ ನೀಡುತ್ತಿದ್ದರು ಎಂದಿದ್ದಾರೆ.
'ಮೈದಾನದಲ್ಲಿ ಆಟದ ಬಗ್ಗೆ ಈ ವ್ಯಕ್ತಿಗೆ ಅದ್ಭುತವಾದ ತಿಳುವಳಿಕೆಯಿದೆ. ಪಂದ್ಯಕ್ಕೆ ಮುಂಚಿತವಾಗಿ ಹೆಚ್ಚು ಯೋಜನೆಗಳನ್ನು ರೂಪಿಸಿಕೊಳ್ಳಲು ಇಷ್ಟಪಡದ ಅವರು, ಪಂದ್ಯದ ಸಂದರ್ಭದಲ್ಲಿ ತಮ್ಮ instinct ಮೇಲೆ ಅವಲಂಬಿತರಾಗಲು ಬಯಸುತ್ತಾರೆ. ಇದೇ ಅವರ ವಿಶೇಷ ಸಾಮರ್ಥ್ಯವಾಗಿತ್ತು. ಅವರು ಅತ್ಯಂತ ಶಾಂತಚಿತ್ತರಾಗಿರುವ ವ್ಯಕ್ತಿ ಎಂದು ಎಲ್ಲರಿಗೂ ತಿಳಿದಿದೆ. ಪಂದ್ಯದ ಸನ್ನಿವೇಶಗಳನ್ನು ಮತ್ತು ಆಟಗಾರರನ್ನು ಬಹಳ ನಿರಾಳವಾಗಿ ಅರ್ಥಮಾಡಿಕೊಳ್ಳಬಲ್ಲರು. ಅವರ ಈ ಗುಣವನ್ನು ನಾನು ಅಳವಡಿಸಿಕೊಂಡು, ನನ್ನ ನಾಯಕತ್ವದಲ್ಲಿಯೂ ಬಳಸಿಕೊಳ್ಳಲು ಬಯಸುತ್ತೇನೆ' ಎಂದು ಫಾಫ್ ಹೇಳಿದರು.
ಇದಕ್ಕೂ ಮುನ್ನ, 2018ರ ಕೇಪ್ ಟೌನ್ ಚೆಂಡು ವಿರೂಪಗೊಳಿಸುವ (ball-tampering) ವಿವಾದವನ್ನು ಸ್ಟೀವ್ ಸ್ಮಿತ್ ನಿಭಾಯಿಸಿದ ರೀತಿ, ತಮಗೆ ಎರಡು ವರ್ಷಗಳ ಹಿಂದೆ ಎದುರಾಗಿದ್ದ ಇದೇ ರೀತಿಯ ಅನುಭವವನ್ನು ನೆನಪಿಸಿತು ಎಂದು ಡು ಪ್ಲೆಸಿಸ್ ಸ್ಮರಿಸಿಕೊಂಡರು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಸ್ಮಿತ್ ಹೊಣೆಯನ್ನು ಹೊತ್ತುಕೊಂಡಾಗ, ಆ ಘಟನೆ ವ್ಯಾಪಕ ಟೀಕೆಗೆ ಕಾರಣವಾಯಿತು. ಆದರೂ, ಸ್ಮಿತ್ ಅವರ ಈ ನಿರ್ಧಾರದ ಬಗ್ಗೆ ತಮಗೆ ಸಹಾನುಭೂತಿ ಇದೆ ಎಂದು ಡು ಪ್ಲೆಸಿಸ್ ಹೇಳಿದರು.
'ಅಂದು (2018ರಲ್ಲಿ ಕೇಪ್ ಟೌನ್‌ನಲ್ಲಿ) ದಿನದ ಕೊನೆಯಲ್ಲಿ ಸ್ಟೀವ್ ಮುಂದೆ ಬಂದು, 'ನಾನು ಜವಾಬ್ದಾರಿಯನ್ನು ಹೊರುತ್ತೇನೆ' ಎಂದು ಹೇಳಿದರು. ಆಗ ನಾವು, 'ನೀವು ಏಕೆ ಜವಾಬ್ದಾರಿಯನ್ನು ಹೊರುತ್ತಿದ್ದೀರಿ? ನೀವು ಏನೂ ತಪ್ಪಾಗಿ ಮಾಡಿಲ್ಲವಲ್ಲ' ಎಂದು ಕೇಳಿದೆವು' ಎಂದು 'ಕ್ರಿಕ್‌ಇನ್ಫೋ' ಜೊತೆ ಮಾತನಾಡುತ್ತಾ ಡು ಪ್ಲೆಸಿಸ್ ಆ ಘಟನೆಯನ್ನು ನೆನಪಿಸಿಕೊಂಡರು.
ನಂತರ ಐಸಿಸಿ ಸ್ಮಿತ್‌ಗೆ ಒಂದು ಟೆಸ್ಟ್ ಪಂದ್ಯದಿಂದ ನಿಷೇಧ ಹೇರಿತು. ಅದೇ ವೇಳೆ, ಕ್ರಿಕೆಟ್ ಆಸ್ಟ್ರೇಲಿಯಾವು ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರಿಗೆ 12 ತಿಂಗಳ ನಿಷೇಧವನ್ನು ವಿಧಿಸಿತು ಹಾಗೂ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಅವರಿಗೆ ಒಂಬತ್ತು ತಿಂಗಳ ನಿಷೇಧವನ್ನು ವಿಧಿಸಿತು. ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ, ಸ್ಯಾಂಡ್‌ಪೇಪರ್ ಬಳಸಿ ಚೆಂಡಿನ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾಗ ಬ್ಯಾನ್‌ಕ್ರಾಫ್ಟ್ ಸಿಕ್ಕಿಬಿದ್ದ ನಂತರ ಈ ಹಗರಣ ಬೆಳಕಿಗೆ ಬಂದಿತು.