ಬೆಂಗಳೂರು: 2012ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತ್ಯುತ್ತಮ ನಟ ಹಾಗೂ ನಿರ್ಮಲ ಚೆನ್ನಪ್ಪ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿನ ಅಭಿನಯಕ್ಕಾಗಿ ನಟ ದರ್ಶನ್ ಈ ಪ್ರಶಸ್ತಿಗೆ ಪಾತ್ರರಾದರೆ, 'ತಲ್ಲಣ' ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ನಿರ್ಮಲ ಚೆನ್ನಪ್ಪ ಅವರನ್ನು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜೀವಮಾನ ಸಾಧನೆಗೆ ನೀಡುವ ಡಾ.ರಾಜ್‌ಕುಮಾರ್ ಪ್ರಶಸ್ತಿಗೆ ಎಂ.ಭಕ್ತವತ್ಸವ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಚಿ.ದತ್ತರಾಜ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ಹಿರಿಯ ನಟ ರಾಜೇಶ್ ಆಯ್ಕೆಯಾಗಿದ್ದಾರೆ. ಈ ಮೂರು ಪ್ರಶಸ್ತಿಗೆ ತಲಾ ಎರಡು ಲಕ್ಷ ರುಪಾಯಿ ನಗದು ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.
ತನ್ಮಯ ಚಿತ್ರ ನಿರ್ಮಾಣದ 'ತಲ್ಲಣ' ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರರಾದರೆ. ಬಸಂತ್ ಪ್ರೊಡಕ್ಷನ್ಸ್ ನಿರ್ಮಾಣದ 'ಭಾರತ್ ಸ್ಟೋರ್ಸ್' ದ್ವಿತೀಯ ಹಾಗೂ ಮೇಘ ಮೂವೀಸ್ ನಿರ್ಮಾಣದ 'ಎದೆಗಾರಿಕೆ' ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿವೆ. ಚಿತ್ರದ ನಿರ್ಮಾಣ ಮತ್ತು ನಿರ್ದೇಶನ ಎರಡು ವಿಭಾಗಕ್ಕೂ ಇಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
ರಂಗ ಕಹಳೆ ಕ್ರಿಯೇಷನ್ಸ್ ನಿರ್ಮಾಣದ 'ಕಾರಣಿಕ ಶಿಶು' ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿಗೆ ಆಯ್ಕೆಯಾದರೆ, 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ಗಮನ ಸೆಳೆದಿದೆ. 'ಲಿಟ್ಸ್ ಮಾಸ್ಟರ್' ಅತ್ಯುತ್ತಮ ಮಕ್ಕಳ ಚಿತ್ರ, 'ಅಲೆಮಾರಿ' ನಿರ್ದೇಶಕರ ಪ್ರಥಮ ನಿರ್ದೇಶನ ಅತ್ಯುತ್ತಮ ಚಿತ್ರ ಹಾಗೂ 'ಕೊಂಚಾವರಂ' ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿವೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಸಚಿವ ರೋಷನ್ ಬೇಗ್ ಪ್ರಶಸ್ತಿಗಳ ವಿವರ ಪ್ರಕಟಿಸಿದರು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಖಚಿತ ಪಡಿಸಲಿಲ್ಲ. ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2013ನೇ ಸಾಲಿನ ಪ್ರಶಸ್ತಿಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ, ಆದಷ್ಟು ಬೇಗ ಆಯ್ಕೆ ಮಾಡಿ ಪ್ರಕಟಿಸಲು ಚಿಂತನೆ ನಡೆಸಲಾಗಿದೆ.
ಎರಡೂ ವರ್ಷದ ಪ್ರಶಸ್ತಿಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ಆಲೋಚನೆ ಇದೆ ಎಂದು ಹೇಳಿದರು.
ಪ್ರಶಸ್ತಿಗಳ ಆಯ್ಕೆ ಸಮಿತಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್, ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ವಿವರ ನೀಡಿದರು. ಪ್ರಶಸ್ತಿಗಳ ಸ್ಪರ್ಧೆಗೆ 58 ಚಿತ್ರಗಳು ಬಂದಿದ್ದವು. ಅವುಗಳನ್ನು ಆಯ್ಕೆ ಸಮಿತಿ ಒಟ್ಟು 20 ದಿನಗಳಲ್ಲಿ ವೀಕ್ಷಣೆ ಮಾಡಿ, 28 ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿತ್ತು. ಇವುಗಳಲ್ಲಿ ಯಾವ್ಯಾವ ಪ್ರಶಸ್ತಿಗೆ ಯಾರು ಮತ್ತು ಯಾವ ಚಿತ್ರ ಸೂಕ್ತ ಎಂಬುದನ್ನು ಎಲ್ಲ ದೃಷ್ಟಿಗಳಿಂದಲೂ ಪರಿಶೀಲಿಸಿ, ಪರೀಕ್ಷಿಸಿ ಅಂತಿಮವಾಗಿ ಸಮಿತಿಯು ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ನಡೆಸಿದೆ ಎಂದರು.
ಆಯ್ಕೆಗೆ ಹೆಚ್ಚು ಚಿತ್ರಗಳು ಸೂಕ್ತ ಎನಿಸುವಾಗ ಸಣ್ಣಪುಟ್ಟ ಲೋಪಗಳಾಗುವುದು ಸಹಜ. ಹೀಗೆ ಕೆಲವು ವಿಭಾಗಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಇವೆ ಎಂದೆನಿಸಬಹುದು. ಆದರೆ ಸಮಿತಿಯು ಯಾರ ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದೆ ಸೂಕ್ತವೆನಿಸಿದ್ದನ್ನು ನಿಷ್ಠುರವಾಗಿ ಆಯ್ಕೆ ಮಾಡಿದೆ ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್, ಸಮಿತಿ ಪದಾಧಿಕಾರಿಗಳಾದ ಸತ್ಯಮೂರ್ತಿ ಆನಂದೂರು, ಗೋಪಾಲ್, ನಟಿ ಪ್ರಮೀಳಾ ಜೋಷಾಯ್, ಅಪ್ಪುಗೆರೆ ತಿಮ್ಮರಾಜು, ಸಾ.ರಾ.ಗೋವಿಂದು ಹಾಗೂ ಮುರಳೀಧರ ಹಾಲಪ್ಪ ಹಾಜರಿದ್ದರು.
ಪ್ರಶಸ್ತಿಪಟ್ಟಿ
ನಟ-ದರ್ಶನ್(ಚಿತ್ರ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ)
ನಟಿ- ನಿರ್ಮಲ ಚೆನ್ನಪ್ಪ (ಚಿತ್ರ; ತಲ್ಲಣ)
ಪೋಷಕ ನಟ-(ಚಿತ್ರ: ಕಳವು)
ಪೋಷಕ ನಟಿ-(ಅರುಣಾ ಬಾಲರಾಜ್ (ಚಿತ್ರ; ಒಲವಿನ ಓಲೆ)
ಕತೆ-ಬರಗೂರು ರಾಮಚಂದ್ರಪ್ಪ ( ಚಿತ್ರ; ಅಂಗೂಲಿಮಾಲ)
ಚಿತ್ರಕತೆ-ಕೆ.ವೈ ನಾರಾಯಣಸ್ವಾಮಿ (ಚಿತ್ರ; ಕಳವು )
ಸಂಭಾಷಣೆ-ಎಂ.ಎಸ್. ರಮೇಶ್ (ಚಿತ್ರ; ಭೀಮಾ ತೀರದಲ್ಲಿ )
ಛಾಯಾಗ್ರಹಣ- ರಾಕೇಶ್ (ಚಿತ್ರ; ಎದೆಗಾರಿಕೆ)
ಸಂಗೀತ ನಿರ್ದೇಶನ- ಅರ್ಜುನ್ ಜನ್ಯ (ಚಿತ್ರ; ಅಲೆಮಾರಿ)
ಸಂಕಲನ-ಪಿ.ಆರ್.ಸೌಂದರ ರಾಜ್ (ಚಿತ್ರ; ಸಾಗರ್)
ಬಾಲ ನಟ- ಮಾಸ್ಟರ್ ವಿ.ಅನಿಲ್‌ಕುಮಾರ್ (ಚಿತ್ರ; ಕಾರಣಿಕ ಶಿಶು)
ಬಾಲ ನಟಿ-ಬೇಬಿ ಲೇಪನ (ಚಿತ್ರ; ಶೇಷು)
ಕಲಾ ನಿರ್ದೇಶನ- ಭೇಮೇಶಪ್ಪ (ಚಿತ್ರ; ಕರಣಿಕ ಶಿಶು)
ಗೀತರಚನೆ- ಬಿ.ಎಚ್.ಮಲ್ಲಿಕಾರ್ಜುನ್ (ಚಿತ್ರ; ಈ ಭೂಮಿ ಈ ಬಾನು)
ಹಿನ್ನೆಲೆ ಗಾಯಕ-ವಾಸುದೀಕ್ಷಿತ್ (ಚಿತ್ರ; ಸೈಬರ್ ಯುಗದೊಳ್)
ಹಿನ್ನೆಲೆ ಗಾಯಕಿ-ಅನುರಾಧಾ ಭಟ್ (ಚಿತ್ರ; ಲಿಟ್ಸ್ ಮಾಸ್ಟರ್)
ತೀರ್ಪುಗಾರರ ವಿಶೇಷ ಪ್ರಶಸ್ತಿ-ರವಿವರ್ಮ (ಚಿತ್ರ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಾಹಸ ದೃಶ್ಯಗಳ ಸಂಯೋಜನೆಗಾಗಿ)