ಜಿಲ್ಲಾ ಸುದ್ದಿ

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಜನಾರ್ಧನ ರೆಡ್ಡಿಗೆ ಜಾಮೀನು

Srinivasamurthy VN

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಗೆ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜನಾರ್ಧನ ರೆಡ್ಡಿ, ಅವರ ಆಪ್ತರಾದ ಖಾರದಪುಡಿ ಮಹೇಶ್ ಮತ್ತು ಅಲಿಖಾನ್ ಸೇರಿದಂತೆ 10 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿ ಕುರಿತಂತೆ ಇಂದು ವಿಚಾರಣೆ ನಡೆಸಿದ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯ ಜನಾರ್ಧನ ರೆಡ್ಡಿ ಮತ್ತು ಅವರ 9 ಮಂದಿ ಆಪ್ತರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಅಕ್ರಮ ಗಣಿಗಾರಿಕೆ ನಡೆಸಿ ಸಿಬಿಐ ಅಧಿಕಾರಿಗಳಿಂದ 2011 ಸೆಪ್ಟೆಂಬರ್ 5ರಂದು ಬಂಧನಕ್ಕೀಡಾಗಿದ್ದ ಜನಾರ್ಧನ ರೆಡ್ಡಿ ವಿರುದ್ಧ ಒಟ್ಟು 7 ಪ್ರಕರಣಗಳ ದಾಖಲಾಗಿದ್ದು, ಈ ಪೈಕಿ ಇಂದು ಜಾಮೀನು ದೊರೆತ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸೇರಿದಂತೆ ಒಟ್ಟು 5 ಪ್ರಕರಣಗಳಲ್ಲಿ ರೆಡ್ಡಿಗೆ ಜಾಮೀನು ದೊರೆತಿದೆ. ಇನ್ನು ಉಳಿದ 2 ಪ್ರಕರಣಗಳಲ್ಲಿ ರೆಡ್ಡಿಗೆ ಜಾಮೀನು ದೊರೆತರೆ ಮಾತ್ರ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಇದೇ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ 1 ಪ್ರಕರಣದಲ್ಲಿ ಮತ್ತು ಒಎಂಸಿ ಗಣಿ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ದೊರೆತರೆ ಮಾತ್ರ ಜನಾರ್ಧನ ರೆಡ್ಡಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಇದೇ ಡಿಸೆಂಬರ್ 3ರಂದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮತ್ತು ಡಿಸೆಂಬರ್ 16 ರಂದು ಸುಪ್ರೀಂಕೋರ್ಟ್‌ನಲ್ಲಿ ಒಎಂಸಿ ಅಕ್ರಮ ಗಣಿಗಾರಿಕ ಪ್ರಕರಣದ ವಿಚಾರಣೆ ನಡೆಯಲಿದೆ. ಈ ಎರಡೂ ಪ್ರಕರಣಗಳಲ್ಲಿ ಜನಾರ್ಧನ ರೆಡ್ಡಿಗೆ  ಜಾಮೀನು ದೊರೆತರೆ ಮಾತ್ರ ರೆಡ್ಡಿ ಜೈಲಿನಿಂದ ಹೊರಬರುತ್ತಾರೆ.

SCROLL FOR NEXT