ಜಿಲ್ಲಾ ಸುದ್ದಿ

ಬಾರ್‌ನಲ್ಲಿ ಬೆಂವಿವಿ ಖಾಲಿ ಉತ್ತರ ಪತ್ರಿಕೆ!

Mainashree

ಬೆಂಗಳೂರು: ಬೆಂಗಳೂರು ವಿವಿ ಉತ್ತರ ಪತ್ರಿಕೆ ಅಪಹರಣ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಖಾಲಿ ಉತ್ತರ ಪತ್ರಿಕೆಗಳು ಮಾರತ್‌ಹಳ್ಳಿಯ ಬಾರ್‌ನಲ್ಲಿ ದೊರೆಯುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ ವಿವಿಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಲೋಪದೋಷಗಳಿರುವುದನ್ನು ಸಾಬೀತುಪಡಿಸಿದೆ.

ಬೆಂವಿವಿ ಪದವಿ ತರಗತಿಗಳಿಗಾಗಿ ನೀಡಲಾಗಿದ್ದ ಖಾಲಿ ಉತ್ತರ ಪತ್ರಿಕೆಗಳು ಮಾರತ್‌ಹಳ್ಳಿಯ ತ್ರಿವೇಣಿ ಬಾರ್‌ನಲ್ಲಿ ದೊರೆತಿವೆ. ಡಿ.2ರಂದು ಬಾರ್‌ಗೆ ಬಂದಿದ್ದ ವ್ಯಕ್ತಿಯೊಬ್ಬ ನಾಲ್ಕು ಸೆಟ್ ಉತ್ತರ ಪತ್ರಿಕೆಗಳನ್ನು ಅಲ್ಲಿಯೇ ಬಿಟ್ಟುಹೋಗಿದ್ದ. ಅದನ್ನು ವ್ಯಕ್ತಿಯೊಬ್ಬ ಕ್ಯಾಷಿಯರ್‌ಗೆ ತಲುಪಿಸಿದ್ದಾನೆ.

ಕ್ಯಾಷಿಯರ್ ಎಚ್‌ಎಎಲ್ ಠಾಣೆಯ ಪೊಲೀಸರಿಗೆ ತಲುಪಿಸಿದ್ದಾರೆ. ನಂತರ, ಪೊಲೀಸರು ವಿಷಯವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮುಟ್ಟಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ.

ಈ ಉತ್ತರ ಪತ್ರಿಕೆಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಇವು ಮಾರತ್‌ಹಳ್ಳಿಯ ನ್ಯೂಹಾರಿಜನ್ ಕಾಲೇಜಿಗೆ ಸೇರದವೆಂದು ತಿಳಿದುಬಂದಿದೆ. ಈ ಸಂಬಂಧ ಸದ್ಯದಲ್ಲೇ ಶೈಕ್ಷಣಿಕ ಸಮಿತಿ ರಚಿಸಿ ತನಿಖೆ ಕೈಗೊಳ್ಳಲಾಗುವುದು. ತನಿಖೆ ನಂತರ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ಎನ್.ನಿಂಗೇಗೌಡ ಸುದ್ದಿಗಾರರಿಗೆ ತಿಳಿಸಿದರು.

ಸಿಸಿಟಿವಿ ಸಾಕ್ಷ್ಯ: ಉತ್ತರ ಪತ್ರಿಕೆಗಳು ಬಾರ್‌ಗೆ ಹೇಗೆ ಬಂತು ಎಂದು ಕಂಡುಕೊಳ್ಳುವ ಉದ್ದೇಶದಿಂದ ಪೊಲೀಸರು ಬಾರ್‌ನಲ್ಲಿದ್ದ ಸಿಸಿಟಿವಿ ವಿಡಿಯೋ ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿಯೊಬ್ಬ ಬಾರಿಗೆ ಬರುವ ಸಂದರ್ಭದಲ್ಲಿ ಉತ್ತರ ಪತ್ರಿಕೆಗಳನ್ನು ತಂದಿದ್ದು, ನಂತರ ಹೋಗುವ ಸಂದರ್ಭದಲ್ಲಿ ಮೇಜಿನ ಮೇಲೆ ಬಿಟ್ಟು ಹೋಗಿದ್ದಾನೆ. ಈ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ವಿವಿಯು ಕಾಲೇಜಿಗೆ ಭೇಟಿ ನೀಡಿ ಉತ್ತರ ಪತ್ರಿಕೆಗಳ ಮಾಹಿತಿ ಪಡೆಯಲು ಮುಂದಾದಾಗ, ಕಾಲೇಜಿನ ಆಡಳಿತ ಮಂಡಳಿ ಅಗತ್ಯಕ್ಕಿಂತ ಹೆಚ್ಚಿನ ಉತ್ತರ ಪತ್ರಿಕೆಗಳನ್ನು ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಕಾಲೇಜಿಗೆ ಅವಶ್ಯವಿದ್ದದ್ದು 5,000 ಉತ್ತರ ಪತ್ರಿಕೆಗಳು ಮಾತ್ರ. ಆದರೆ, ವಿವಿಯಿಂದ ಪಡೆದಿರುವುದು 8,000 ಉತ್ತರ ಪತ್ರಿಕೆಗಳು. ಉಳಿಕೆಯಾದ ಉತ್ತರ ಪತ್ರಿಕೆ ಹಾಗೂ ಬಳಕೆಯಾಗಿರುವ ಉತ್ತರ ಪತ್ರಿಕೆಗಳ ಬಗ್ಗೆ ಸೂಕ್ತ ದಾಖಲೆಗಳನ್ನು ನಿರ್ವಹಿಸಿಲ್ಲ ಎಂಬ ಅಂಶ ಗೊತ್ತಾಗಿದೆ.

SCROLL FOR NEXT