ಜಿಲ್ಲಾ ಸುದ್ದಿ

ಕಲಾಪಕ್ಕಿಂತ ಪ್ರಲಾಪವೇ ಜಾಸ್ತಿ

Srinivasamurthy VN

-ಶ್ರೀಶೈಲ ಮಠದ
ಬೆಳಗಾವಿ:
ಕುಂದಾನಗರಿಯಲ್ಲಿ ಈತನಕ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಕಲಾಪಕ್ಕಿಂತ ಪ್ರಲಾಪವೇ ಹೆಚ್ಚು. ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಆವರಣದಲ್ಲಿ ಎರಡು ಬಾರಿ, ಸುವರ್ಣ ವಿಧಾನಸೌಧದ ಕಟ್ಟಡದಲ್ಲಿ ಎರಡು ಬಾರಿ ಅಧಿವೇಶನದ ನಡೆದಿದೆ ನಿಜ. ಆದರೆ ಈ ಅಧಿವೇಶನಗಳಿಂದ ಈ ಭಾಗಕ್ಕೆ ಏನೂ ಪ್ರಯೋಜನವಾಗಿಲ್ಲ.

ಬೆಂಗಳೂರಿನ ವಿಧಾನಸೌಧ ಸುತ್ತಮುತ್ತ ಪ್ರತಿಭಟನೆ, ಧರಣಿ ಸತ್ಯಾಗ್ರಹಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ, ಬೆಳಗಾವಿಯಲ್ಲಿ ಮಾತ್ರ ಪ್ರತಿಭಟನೆಗಳಿಗೆ ನಿರ್ಬಂಧ ಹೇರಲಿಲ್ಲ. ಹಾಗಾಗಿ, ನಾನಾ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಲೆಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿವೆ.  ಸದನದೊಳಗೆ ಪ್ರತಿಪಕ್ಷಗಳು ಮತ್ತು ಹೊರಗೆ ಹಲವು ಸಂಘಟನೆಗಳು ಸರ್ಕಾರದ ವಿರುದ್ಧ ಚಾಟಿ-ಏಟು ಬೀಸುತ್ತ ಬಂದಿವೆ. ಈ ಹಿಂದಿನ ಎರಡು ಅಧಿವೇಶನ ಹೊರತು ಪಡಿಸಿದರೆ, ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕಲಾಪಕ್ಕಿಂತ ದೊಡ್ಡ ಸುದ್ದಿ ಮಾಡಿದ್ದು ಪ್ರತಿಭಟನೆಗಳೇ.

2012ರ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರ ಸಮಿತಿ ನಡೆಸಿದ ಧರಣಿ ವೇಳೆ ಕಲ್ಲು ತೂರಾಟ ನಡೆದಿತ್ತಲ್ಲದೇ, ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್‌ರ ತಲೆಗೆ ಬಲವಾದ ಗಾಯವಾಗಿತ್ತು. ಕಳೆದ ಸುವರ್ಣ ವಿಧಾನಸೌಧದ ಎದುರು ಕಬ್ಬು ಬೆಳೆಗಾರರು ಸೇರಿದಂತೆ 54 ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕಬ್ಬಿಗೆ ಬೆಲೆ ನಿಗದಿ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದ್ದರಿಂದ ರೈತ ವಿಠಲ ಅರಬಾವಿ ವಿಷ ಸೇವಿಸಿ ಸೌಧದ ಎದುರೇ ಆತ್ಮಹತ್ಯೆ ಮಾಡಿಕೊಂಡರು.

ಪ್ರತಿಭಟನೆ ಶತಕ: ಈ ಸಲ ಅಧಿವೇಶನ ಆರಂಭದ ದಿನವೇ 50 ಸಾವಿರ ರೈತರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಘೋಷಿಸಿದೆ. ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘ ಸೇರಿ 100ಕ್ಕೂ ಅಧಿಕ ಸಂಘಟನೆಗಳು ಪ್ರತಿಭಟನೆ ಅನುಮತಿ ಪಡೆದಿವೆ. ಸುವರ್ಣ ವಿಧಾನಸೌಧದಿಂದ ಸುಮಾರು 2 ಕಿ.ಮೀ ಆಂತರದಲ್ಲಿ ಹಲಗಾ ಗ್ರಾಮದ ಬಳಿ ಸ್ಥಳ ನಿಗದಿಯಾಗಿದೆ. ಕಹಿ ಅನುಭವಗಳಿಂದ ಪಾಠ ಕಲಿತಿರುವ ಸರ್ಕಾರ ಈ ಬಾರಿ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆಗೆ ಅವಕಾಶ ಕಲ್ಪಿಸಿಲ್ಲ. ಪೊಲೀಸ್ ಇಲಾಖೆ ನಿಗದಿ ಪಡಿಸಿದ ಸ್ಥಳದಲ್ಲೇ ರಾಜಕೀಯ ಪಕ್ಷಗಳು, ಸಂಘಟನೆ, ಧರಣಿ ನಡೆಸಬಹುದು.

SCROLL FOR NEXT