ಜಿಲ್ಲಾ ಸುದ್ದಿ

ಸಾಂಗ್ಲಿಯಾನ ಪುತ್ರಿ ಮೇಲೆ ಹಲ್ಲೆ

Srinivasamurthy VN

ಬೆಂಗಳೂರು: ನಿವೃತ್ತ ಪೊಲೀಸ್ ಆಯುಕ್ತ, ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಪುತ್ರಿ ರಚೆಲ್ ಅವರ ಮೇಲೆ ಬುರ್ಖಾಧಾರಿ ಮಹಿಳೆಯರಿಬ್ಬರು ಹಲ್ಲೆ ನಡೆಸಿರುವ ಘಟನೆ ಭಾನುವಾರ ಮಧ್ಯಾಹ್ನ ಆಡುಗೋಡಿ ಸೂಪರ್ ಮಾರ್ಕೆಟ್‌ನಲ್ಲಿ ನಡೆದಿದೆ. ಆದರೆ ರಚೆಲ್ ಅವರೇ ಮೊದಲು ಜಗಳ ತೆಗೆದು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ರಚೆಲ್ ಠಾಣೆಗೆ ದೂರು ನೀಡಿಲ್ಲ ಎನ್ನಲಾಗುತ್ತಿದೆ.

ವಿವೇಕ ನಗರ ನಿವಾಸಿಯಾಗಿರುವ ರಚೆಲ್ ಅವರು ಆಡುಗೋಡಿಯಲ್ಲಿರುವ ಸೂಪರ್ ಮಾರ್ಕೆಟ್‌ಗೆ ಗೃಹ ಬಳಕೆ ವಸ್ತುಗಳನ್ನು ಖರೀದಿಸಲು ಹೋದಾಗ ಈ ಘಟನೆ ನಡೆದಿದೆ. ಮಳಿಗೆಯಲ್ಲಿ ಬಿಲ್ ಪಾವತಿಸಲು ಸರತಿ ಸಾಲು ಮೀರಿ ಒಳ ನುಗ್ಗಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಜನಾಂಗೀಯವಾಗಿ ನಿಂದಿಸಿ, ಚೀನಾಗೆ ಹೋಗಿ ಎಂದು ಬೈದಿದ್ದಾರೆ ಎಂದು ರಚೆಲ್ ತಂದೆ ಎಚ್.ಟಿ.ಸಾಂಗ್ಲಿಯಾನ ತಿಳಿಸಿದರು.

ನನ್ನ ಮಗಳು ಭಾನುವಾರ ಮಧ್ಯಾಹ್ನ ಗೃಹ ಬಳಕೆ ವಸ್ತುಗಳನ್ನು ತರಲು ಆಡುಗೋಡಿ ಠಾಣೆ ಸಮೀಪ ಇರುವ ಸೂಪರ್ ಮಾರ್ಕೆಟ್‌ಗೆ ತೆರಳಿದ್ದಳು. ವಸ್ತುಗಳನ್ನು ತೆಗೆದುಕೊಂಡ ಬಳಿಕ ಬಿಲ್ಲಿಂಗ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಅದೇ ಸಾಲಿನಲ್ಲಿ ಮಹಿಳೆ ಹಾಗೂ ವ್ಯಕ್ತಿಯೊಬ್ಬ ನುಗ್ಗಿ ಬಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಚೆಲ್, ಸರದಿ ಸಾಲಿನಲ್ಲಿ ಬನ್ನಿ ಎಂದಿದ್ದಾರೆ. ಆಗ ಮಹಿಳೆ ಹಿಂದಿ ಮಿಶ್ರಿತ ಉರ್ದು ಭಾಷೆಯಲ್ಲಿ ಏನನ್ನೋ ಮಾತಾಡಿಕೊಂಡು ಸ್ಥಳದಿಂದ ಹೊರಟು ಹೋದರು. ಆದರೆ ಕೆಲ ನಿಮಿಷಗಳಲ್ಲೇ ಮತ್ತೊಬ್ಬ ಮಹಿಳೆಯನ್ನು ಕೌಂಟರ್ ಬಳಿ ಕರೆತಂದು, ರಚೆಲ್ ಅವರನ್ನು ನಿಂದಿಸಿದ್ದಾರೆ.

ನೀವು ಇರಾಕ್ ಹಾಗೂ ಚೀನಾಕ್ಕೆ ಹೋಗಿ. ನಿಮ್ಮಿಂದಲೇ ಎಲ್ಲ ಹಾಳಾಗುತ್ತಿದೆ ಎಂದು ಬೈದಿದ್ದಾರೆ. ಅಲ್ಲದೆ ರಚೆಲ್ ಕೂದಲು ಹಿಡಿದು ಎಳೆದಾಡಿದ್ದಾರೆ. ನಂತರ ಕೈ, ಕಾಲುಗಳಿಂದಲೂ ಹಲ್ಲೆ ನಡೆಸಿದ್ದಾರೆ. ರಚೆಲ್ ಕೂಡಲೇ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ನಿಯಂತ್ರಣ ಕೊಠಡಿಗೆ ಕರೆಮಾಡು ಎಂದಾಗ 100ಕ್ಕೆ ಕರೆ ಮಾಡಿಗದ್ದಳು. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಹಲ್ಲೆ ನಡೆಸಿದವರು ಸ್ಥಳದಿಂದ ಪರಾರಿಯಾಗಿದ್ದರು ಎಂದು ಸಾಂಗ್ಲಿಯಾನ ತಿಳಿಸಿದರು.

ದೂರು ನೀಡಿಲ್ಲ: ಸ್ಥಳಕ್ಕೆ ಆಗಮಿಸಿದ್ದ ಆಡುಗೋಡಿ ಪೊಲೀಸರು ರಚೆಲ್ ಅವರಿಂದ ಮಾಹಿತಿ ಪಡೆದುಕೊಂಡು ಮಳಿಗೆಯಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯರಿಬ್ಬರು ಬುರ್ಖಾ ಧರಿಸಿದ್ದರಿಂದ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇನ್ನು ಪೊಲೀಸರು ದೂರು ನೀಡಿ ಎಂದು ರಚೆಲ್ ಅವರನ್ನು ಕೇಳಿದಾಗ ಅವರು ಅದನ್ನು ನಿರಾಕರಿಸಿದ್ದಾರೆ.

ಇದೊಂದು ಸಣ್ಣಪುಟ್ಟ ವಿಷಯ. ನಾನು ದೂರು ನೀಡಬೇಡ ಎಂದು ಮಗಳಿಗೆ ತಿಳಿಸಿದ್ದೇನೆ. ಗಂಭೀರ ವಿಷಯ ಎನಿಸಿದರೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬಹುದು.
-ಸಾಂಗ್ಲಿಯಾನ

SCROLL FOR NEXT