ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆ(ಇಸಿಸ್)ಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಟ್ವೀಟರ್ ನಿರ್ವಹಣೆ ಹಿಂದೆ ಬೆಂಗಳೂರಿಗನ ಕೈವಾಡವಿರುವ ಬಗ್ಗೆ ಸುದ್ದಿವಾಹಿನಿ ವರದಿಯ ಸತ್ಯಾ ಸತ್ಯತೆ ಅರಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರು ಹೇಳಿದ್ದಾರೆ.
ಬ್ರಿಟನ್ ಮೂಲದ ಚಾನೆಲ್ 4 ನ್ಯೂಸ್ ಸುದ್ದಿವಾಹಿನಿ ವರದಿ ಮಾಡುರವಂತೆ ಇಸಿಸ್ ಹೆಸರಲ್ಲಿ ಪ್ರಕಟವಾಗುತ್ತಿದ್ದ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರು ಮೂಲದ ವ್ಯಕ್ತಿ ಕೈವಾಡವಿರುವುದಾಗಿ ಇಂದು ಬೆಳಗ್ಗೆಯಷ್ಟೇ ನಮಗೆ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸಿಸಿಬಿ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಎಂ.ಎಂ ರೆಡ್ಡಿ ಹೇಳಿದ್ದಾರೆ.
ಈ ವರದಿಯ ಸತ್ಯಾಸತ್ಯತೆಯನ್ನು ತಿಳಿಸುವ ಸಲುವಾಗಿ ತನಿಖೆಗೆ ಸೂಚಿಸಲಾಗಿದೆ ತನಿಖಾ ವರದಿ ಬಂದ ನಂತರ ಈ ಬಗ್ಗೆ ಯಾವ ರೀತಿ ಕ್ರಮಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ರೆಡ್ಡಿ ಹೇಳಿದ್ದಾರೆ.
ಬ್ರಿಟನ್ ಮೂಲದ 'ಚಾನೆಲ್ 4' ನ್ಯೂಸ್ ಸುದ್ದಿವಾಹಿನಿ ವರದಿ ಮಾಡಿರುವಂತೆ ಇಸಿಸ್ ಹೆಸರಲ್ಲಿ ಪ್ರಕಟವಾಗುತ್ತಿದ್ದ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರು ಮೂಲದ ವ್ಯಕ್ತಿ ಕೈವಾಡವಿದೆ ಎಂದು ಶಂಕಿಸಲಾಗಿದೆ. ಬೆಂಗಳೂರಿನಲ್ಲಿದ್ದುಕೊಂಡೇ ಈ ವ್ಯಕ್ತಿ ಟ್ವಿಟರ್‌ನಲ್ಲಿ ದೇಶವಿದ್ರೋಹ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದನು ಎಂದು ಸುದ್ದಿವಾಹಿನಿ ಆರೋಪಿಸಿದೆ. 'ಶಮಿವಿಟ್ನೆಸ್' ಎಂಬ ಹೆಸರಲ್ಲಿ ಟ್ವಿಟರ್ ಖಾತೆ ತೆರೆದು ಅಲ್ಲಿ ಇಸಿಸ್ ಪರವಾಗಿ ಇಸ್ಲಾಂ ಸೈದ್ಧಾಂತಿಕ ನಿಲುವುಗಳನ್ನು ಪಸರಿಸುವ ಮೂಲಕ ವಿಶ್ವಾದ್ಯಂತವಿರುವ ಇಸ್ಲಾಂ ಯುವಕರನ್ನು ಇಸಿಸ್‌ಗೆ ಸೇರುವಂತೆ ಪ್ರೇರೇಪಿಸುತ್ತಿದ್ದನು.
ಪ್ರತೀ ತಿಂಗಳು ಈತ ಸುಮಾರು 2 ಮಿಲಿಯನ್ ಪ್ರಚೋದನಕಾರಿ ಸಂದೇಶಗಳನ್ನು ಟ್ವಿಟರ್ ಖಾತೆಗೆ ಹಾಕುತ್ತಿದ್ದನು. ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿರುವ ವಿಶ್ವಾದ್ಯಂತ ವಿವಿಧ ಪ್ರದೇಶಗಳಲ್ಲಿ ನೆಲೆಗೊಂಡಿರುವ ಸುಮಾರು 17, 700 ಮಂದಿ ಖಾತೆಯನ್ನು ಪ್ರತಿ ನಿತ್ಯ ವೀಕ್ಷಿಸುತ್ತಿದ್ದರು ಮತ್ತು ಆಯಾ ದೇಶಗಳ ಕುರಿತ ಸುದ್ದಿ ಸಮಾಚಾರಗಳನ್ನು ಚರ್ಚೆ ನಡೆಸುತ್ತಿದ್ದರು ಎಂದು ಚಾನೆಲ್ 4 ಸುದ್ದಿವಾಹಿನಿ ಹೇಳಿದೆ.