ಬೆಂಗಳೂರು: ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳದ ಕೋಣಗಳೇ ಸುಪ್ರೀಂ ಕೋರ್ಟ್‌ಗೆ ಹೋಗಿ ತಮ್ಮ ಪರ ತೀರ್ಪು ಪಡೆದು ಬಂದಿರುವಾಗ ರಾಜ್ಯದ ಸ್ವಾಮೀಜಿಗಳಿಗೆ ಮಠ ಸ್ವಾಧೀನ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲೇನಾಗಿತ್ತು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ವ್ಯಂಗ್ಯ ವಾಡಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿದೆ. ಹೀಗಾಗಿ ಈ ವಿಚಾರ ಸರಿಯೋ, ತಪ್ಪೋ ಎಂದು ನಾನು ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ ಎಂದು ಹೇಳಿದರು. ಆದರೆ, ವಿಧೇಯಕ ಮಂಡನೆ ಹಿನ್ನಲೆಯಲ್ಲಿ ಮಠಾಧೀಶರ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಹೇಳಿದಿಷ್ಟು...
ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ ಇದೆ. ಆದರೆ, ಈ ಕಾರಣಕ್ಕಾಗಿ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂದು ಉದ್ಧಟತನದ ಮಾತನಾಡುವುದಕ್ಕೆ ಇವರ್ಯಾರು?
ಈ ದೇಶದ ಕಾನೂನು ಪ್ರಕಾರ ಎಲ್ಲರೂ ಸಮಾನರೇ. ಮಠಾಧೀಶರದ್ದೇನು ಪ್ರತ್ಯೇಕ ಗಣರಾಜ್ಯವಲ್ಲ. ಅವರೇನು ತಪ್ಪು ಮಾಡುವುದಿಲ್ಲವೇ? ಮೊನ್ನೆ ಒಬ್ಬ ಸ್ವಾಮೀಜಿಗೆ ನ್ಯಾಯಾಲಯ ಶಿಕ್ಷೆ ನೀಡಿದೆ. ಹಲವು ಸ್ವಾಮೀಜಿಗಳು ನಾನಾ ಆರೋಪ ಎದುರಿಸುತ್ತಿದ್ದಾರೆ. ಇಂಥವರನ್ನೆಲ್ಲ ಹಾಗೆಯೇ ಬಿಡಬೇಕೆ? ನಮ್ಮದೇ ಧರ್ಮದವರನ್ನು ಸ್ಪರ್ಶಿಸುವುದಕ್ಕೆ ಇವರಲ್ಲಿ ಕೆಲವರಿಗೆ ಆಗುವುದಿಲ್ಲ. ದಲಿತರ ಜತೆ ಸಹಪಂಕ್ತಿ ಭೋಜನ ನಡೆಸಿದರೆ ಇವರೇನು ಸಾಯುತ್ತಾರೆಯೇ?
ಸಿದ್ಧಗಂಗಾಶ್ರೀಗಳು, ಶೃಂಗೇರಿ ಶ್ರೀಗಳ ಮೇಲೆ ನನಗೆ ಅಪಾರ ಗೌರವ ಇದೆ. ಪೇಜಾವರ ಶ್ರೀಗಳೂ ಒಳ್ಳೆಯ ವ್ಯಕ್ತಿ. ಅವರಿಗೆ ಸ್ವಲ್ಪ ಆರ್‌ಎಸ್‌ಎಸ್ ಪ್ರಭಾವ ಇದೆ ಎಂಬುದನ್ನು ಹೊರತುಪಡಿಸಿದರೆ, ಅವರೂ ನಮ್ಮ ದೇಶದ ಶ್ರೇಷ್ಠ ಸಂತರಲ್ಲಿ ಒಬ್ಬರು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಯ ಸ್ವಾಮೀಜಿಗಳು ಮಾತ್ರ ಸರ್ಕಾರ ಉರುಳಿಸುವ ಮಾತನಾಡಿದ್ದಾರೆ.