ಸಾರ್ವಜನಿಕರಿಂದ ಪ್ರತಿಭಟನೆ 
ಜಿಲ್ಲಾ ಸುದ್ದಿ

ನರಹಂತಕ ಹುಲಿ ಹಿಡಿಯಿರಿ, ಇಲ್ಲ ಗುಂಡು ಹೊಡೆಯಿರಿ

ಜಾಂಬೋಟಿ(ಬೆಳಗಾವಿ): ನರಹಂತಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ. ಅದನ್ನು ಜೀವಂತವಾಗಿ ಇಲ್ಲವೇ ಕೊಂದಾದರೂ ಹಿಡಿದು ತನ್ನಿ!

ಬುಧವಾರ ಸಂಜೆ ಖಾನಾಪುರ ತಾಲೂಕಿನ ಮರಗಾಯಿ ಗ್ರಾಮದ ಬಳಿಯ ಕರಗೀಳಿಯಲ್ಲಿ ಗರ್ಭಿಣಿಯ ಮೇಲೆ ದಾಳಿ ಮಾಡಿದ ವ್ಯಾಘ್ರ, ಆಕೆಯನ್ನು ಹೊತ್ತೊಯ್ದು ಸಿಗಿದು ಹಾಕಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಭುಗಿಲೆದ್ದಿರುವ ಆಕ್ರೋಶ ಶಮನಕ್ಕೆ ರಾಜ್ಯ ಅರಣ್ಯ ಇಲಾಖೆ ಇಂಥ ಆದೇಶ ಹೊರಡಿಸಿದೆ.

ನಿಮಗೆ ಸಾಧ್ಯವಾದರೆ ಈ ನರಹಂತಕ ಹುಲಿಯನ್ನು ಹಿಡಿಯಿರಿ. ಇಲ್ಲದಿದ್ದರೆ ಗುಂಡಿಕ್ಕಿಯಾದರೂ ಸಾಯಿಸಿ ಎಂಬುದು ಘಟನೆಯಿಂದ ರೊಚ್ಚಿಗೆದ್ದಿದ್ದ ಗ್ರಾಮಸ್ಥರ ಆಗ್ರಹವಾಗಿತ್ತು. ಸ್ಥಳದಲ್ಲಿ ಸೇರಿದ್ದ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಗುರುವಾರ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು.

ಒಂದು ಹಂತದಲ್ಲಿ ಸಹನೆ ಕಳೆದುಕೊಂಡ ಗ್ರಾಮಸ್ಥರ ಕೋಪ, ಪೊಲೀಸ್ ಅರಣ್ಯ ಇಲಾಖೆ ಸಿಬ್ಬಂದಿಯೆಡೆಗೆ ತಿರುಗಿತು. ಕೈಗೆ ಸಿಕ್ಕ ಕಲ್ಲುಗಳನ್ನು ಅವರ ಮೇಲೆ ತೂರಿದರು. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾದವು.

ಗತು ಕಾಣಿಸದೇ ಬಿಡೆವು: ನರಹಂತಕ ಹುಲಿಗೊಂದು ಗತಿ ಕಾಣಿಸಿ. ಅಲದಲ್ಲದೆ ಮೃತಳ ಕುಟುಂಬಕ್ಕೆ ಯೋಗ್ಯ ಪರಿಹಾರ ನೀಡಿ. ಅಲ್ಲಿಯ ತನಕ ಶವಪರೀಕ್ಷೆ ನಡೆಸಲು ನಾನು ಬಿಡುವುದಿಲ್ಲ. ಅಂತ್ಯ ಸಂಸ್ಕಾರವನ್ನೂ ನಡೆಸುವುದಿಲ್ಲ ಎಂದು ಶಾಸಕ ಅರವಿಂದ ಪಾಟೀಲ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮೃತದೇಹವನ್ನು ಸ್ಥಳದಿಂದ ಒಯ್ಯಲು ಸಹ ಬಿಡಲಿಲ್ಲ. ಇದರಿಂದ ಕೆಲ ಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.

ಅಂತೂ ಶಾಂತರಾದರು: ಘಟನಾ ಸ್ಥಳಕ್ಕೆ ಭೇಟಿ ನೀಡಿದ, ಸಂಸದ ಪ್ರಕಾಶ ಹುಕ್ಕೇರಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ನ್ಯಾಮಗೌಡ, ಮಹಿಳೆಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ರು. 5 ಲಕ್ಷ ಪರಿಹಾರ ಧನ ಘೋಷಣೆ ಮಾಡಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರು. 2 ಲಕ್ಷ ಪರಿಹಾರ ನೀಡುವ ಭರವಸೆಯನ್ನೂ ಸಂಸದ ಹುಕ್ಕೇರಿ ನೀಡಿದರು.

ಏನಾಗಿತ್ತು?: ನೀಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗಾಯಿ ಗ್ರಾಮದಿಂದ 5 ಕಿ.ಮೀ. ದೂರದಲ್ಲಿರುವ ತೋಟದಲ್ಲಿ ಹಣಬರ ಕುಟುಂಬದವರು ಬುಧವಾರ ಸಂಜೆ ಬೆಳೆ ರಾಶಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪಕ್ಕದ ಹಳ್ಳದಿಂದ ನೀರು ತರಲು ತೆರಳಿದ್ದ ಅಂಜನಾ ಹಣಬರ(22) ಎಂಬ ಮಹಿಳೆಯನ್ನು ವ್ಯಾಘ್ರ ಹೊತ್ತೊಯ್ದು ಸುಮಾರು ಅರ್ಧ ಕಿ.ಮೀ ದೂರದಲ್ಲಿ ಕೊಂದು ಹಾಕಿದೆ. ಮಹಿಳೆಯ ಮುಖ, ಎದೆ, ಎಡಗಾಲಿನ ಮಾಂಸವನ್ನು ತಿಂದು ಹಾಕಿತ್ತು. ನೀರು ತರಲು ಹೋದವಳು ಬಾರದಿರುವುದರಿಂದ ಹುಡುಕಾಟದಲ್ಲಿ ತೊಡಗಿದ್ದ ಕುಟುಂಬಸ್ಥರಿಗೆ ಸ್ಥಳದಲ್ಲಿ ರಕ್ತದ ಕಲೆ ಮತ್ತು ಹರಿದ ಸೀರೆಯ ಚೂರು ಸಿಕ್ಕಿದೆ. ಜತೆಗೆ ಎಳೆದೊಯ್ದ ಗುರುತೂ ಸಿಕ್ಕಿತ್ತು. ಹೀಗಾಗಿ ರಾತ್ರಿಯೆಲ್ಲಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ರಾತ್ರಿಯೆಲ್ಲ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ರಾತ್ರಿಯ ಹೊತ್ತಿಗೆ ವ್ಯಾಘ್ರ ಮಹಿಳೆಯನ್ನು ಕಚ್ಚಿ ತಿನ್ನುತ್ತಿರುವುದು ಕಂಡಿದೆ ಎಂದು ಪ್ರತ್ಯಕ್ಷದರ್ಶಿ ರಮೇಶ ತಿಳಿಸಿದ್ದಾನೆ.



- ರಾಯಣ್ಣ ಆರ್.ಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT