ಜಿಲ್ಲಾ ಸುದ್ದಿ

ಸ್ಫೋಟ: ತನಿಖೆ ಚುರುಕು ಇನ್ನೂ ಶಂಕಿತರ ಸುಳಿವಿಲ್ಲ

Srinivasamurthy VN

ಬೆಂಗಳೂರು: ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ತನಿಖೆ ಚುರುಕುನಿಂದ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ಹೇಳಿದರು.

ದೇಶದ ವಿವಿಧ ತನಿಖಾ ಸಂಸ್ಥೆಗಳು ತನಿಖೆಗೆ ಉತ್ತಮ ಸಹಕಾರ ನೀಡುತ್ತಿದೆ. ಪರಸ್ಪರ ಸಂಯೋಜನೆಯೊಂದಿಗೆ ಕಾರ್ಯಾಚರಣೆ ನಡೆದಿದೆ. ವಿಶೇಷ ತಂಡಗಳಿಗೆ ಒಂದೊಂದು ಜವಾಬ್ದಾರಿ ವಹಿಸಲಾಗಿದ್ದು, ಇದುವರೆಗೂ ಯಾವುದೇ ಶಂಕಿತ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸ್ಫೋಟ ಸಂಭವಿಸಿದ ಸ್ಥಳದ ಸುತ್ತಮುತ್ತಲಿನ ಮಳಿಗೆ, ಹೊಟೆಲ್ ಹಾಗೂ ಇತರೆ ಅಂಗಡಿಗಳ ಸಿಬ್ಬಂದಿ, ಮಾಲೀಕರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳ ವಿಡಿಯೋಗಳನ್ನು ಸಂಗ್ರಹಿಸಿ ಸೂಕ್ಷ್ಮವಾಗಿ ಪರಿಶೀಸಲಾಗುತ್ತಿದೆ ಎಂದರು. ಉಗ್ರರ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳ ಪುಣೆ. ಚೆನ್ನೈ, ಹೈದರಾಬಾದ್ ಮತ್ತು ಮಧ್ಯಪ್ರದೇಶದಲ್ಲಿ ಶೋಧಕಾರ್ಯ ನಡೆಸುತ್ತಿವೆ. ಅನುಮಾನಾಸ್ಪದ ವ್ಯಕ್ತಿಗಳ ಲಿಚಾರಣೆ ನಡೆಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ, ರಾಷ್ಟ್ರೀಯ ತನಿಖಾ ದಳ, ಭಯೋತ್ಪಾದನ ನಿಗ್ರಹದಳವೂ ಉಗ್ರರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿವೆ ಎಂದರು.

ಘಟನಾ ಸ್ಥಳದಲ್ಲಿ ಕೆಲವರು ನೀಡಿದ ಹೇಳಿಕೆ ಮೇರೆಗೆ ಶಂಕಿತ ಉಗ್ರರ ರೇಖಾ ಚಿತ್ರವನ್ನು ಸಿದ್ದಪಡಿಸಲಾಗಿದೆ. ಆದರೆ, ಅಂತಿಮ ನಿರ್ಣಯಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ. ಸಿಸಿ ಕ್ಯಾಮೆರಾಗಳ ವಿಡಿಯೋವನ್ನು ಮತ್ತಷ್ಟು ಸ್ಪಷ್ಟವಾಗಿ ಕಾಣಿಸುವಂತೆ ಮಾಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅಂತಿಮವಾಗಿ ರೇಖಾ ಚಿತ್ರ ಬಿಡುಗಡೆ ಮಾಡಲಾಗುವುದು ಎಂದರು.

ಪೈಪ್ ಬಾಂಬ್ ಬಳಕೆ

ಚರ್ಚ್ಸ್ಟ್ರೀಟ್ ಸ್ಫೋಟಕ್ಕೆ ಪೈಪ್ ಬಾಂಬ್ ಬಳಸಿರುವುದು ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟಿದೆ ಸ್ಫೋಟಗೊಂಡಿದ್ದ ಅವಶೇಷಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೇ ಮಾದರಿಯ ಬಾಂಬ್ ಪುಣೆ ಸ್ಫೋಟ ಮತ್ತು ಚೆನ್ನೈ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿ ಸಂಭವಿಸಿದ ಸ್ಫೋಟಕ್ಕೂ ಬಳಸಾಗಿತ್ತು ಎಂದು ರೆಡ್ಡಿ ತಿಳಿಸಿದರು.

SCROLL FOR NEXT