ಜಿಲ್ಲಾ ಸುದ್ದಿ

ಆದಿವಾಸಿಗಳಿಗೆ ಒಳಮೀಸಲು: ಸಚಿವ ಆಂಜನೇಯ ಭರವಸೆ

ಚಾಮರಾಜನಗರ: ಪರಿಶಿಷ್ಟ ಪಂಗಡಕ್ಕೆ ನೀಡಲಾಗಿರುವ ಮೀಸಲಿನಲ್ಲಿ ಆದಿವಾಸಿಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಜನಗಣತಿ ಬಳಿಕ ಆದಿವಾಸಿಗಳಿಗೆ ಒಳಮೀಸಲು ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.

ಬಿಳಿಗಿರಿ ರಂಗನಾಥ ಹುಲಿ ರಕ್ಷಿತಾರಣ್ಯದ ಗೊಂಬೆಗಲ್ಲಿನಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ವಾಸ್ತವ್ಯ ಹೂಡಲು ಬುಧವಾರ ಆಗಮಿಸಿದ್ದ ಅವರು ಈ ಭರವಸೆ ನೀಡಿದರು. ಸೋಲಿಗೆ ಜನಾಂಗ ಪರಿಶಿಷ್ಟ ಜನಾಂಗದಲ್ಲಿರುವ ಪ್ರಬಲದ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗದ ಕಾರಣ, ಅವರಿಗೆ ಪ್ರತ್ಯೇಕ ಮೀಸಲು ನೀಡಲಾಗುವುದು.

ಮಾತ್ರವಲ್ಲ, ಕಾಡಿನ ಮಕ್ಕಳಾದ ಆದಿವಾಸಿಗಳನ್ನು ಯಾವುದೇ ಕಾರಣಕ್ಕೂ ಎತ್ತಂಗಡಿ ಮಾಡಲು ಬಿಡುವುದಿಲ್ಲ. ಈ ಅರಣ್ಯ ನಿಮ್ಮದು. ನೀವೇ ಮಾಲೀಕರು ಎಂದು ಹೇಳಿದರು.

ಸೋಲಿಗರ ಕಷ್ಟ ಕರ್ಪಣ್ಯಗಳನ್ನು ತಿಳಿಯಲು ಸಚಿವರು ಇಲ್ಲಿ ವಾಸ್ತವ್ಯ ಹೂಡಿದ್ದರು. ಗುಡಿಸಲಿಗೆ ಪ್ರವೇಶಿಸುವ ಮುನ್ನ ತಮ್ಮ ಕಷ್ಟದ ದಿನಗಳನ್ನು ನೆನೆದು, ನಾವೂ ಹೀಗೆ ಇದ್ದೆವು ಎನ್ನುತ್ತ, ಉಪ್ಸಾರು, ರಾಗಿಮುದ್ದೆ, ಕುಂಬಳ ಕಾಯಿ ಪಲ್ಯವನ್ನು ಸವಿದರು.

ಕಾಡಿನಲ್ಲೇ ಸಿಗುವ ಜೇನುತುಪ್ಪ, ಗೆಣಸು, ಕಿತ್ತಲೆ ಹಣ್ಣು ತಿಂದು ನಿದ್ರೆಗೆ ಜಾರಿದರು. ಸಚಿವರಿಗೆ ಶಾಸಕ ನರೇಂದ್ರ ಸಾಥ್ ನೀಡಿದರು. ' ನಾನು ನಿಮ್ಮ ಮನೆಗೆ ಬಂದ ನೆನಪಿಗಾಗಿ 2 ಲಕ್ಷ ನೀಡುತ್ತೇನೆ. ಮತ್ತೆ ಬರುವಷ್ಟರಲ್ಲಿ ಹೊಸ ಮನೆ ಕಟ್ಟಿಕೊಳ್ಳಿ' ಎಂದು ಸಲಹೆ ನೀಡಿದರು.

SCROLL FOR NEXT