ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಆಕ್ರೋಶ ತೀವ್ರಗೊಂಡಿದೆ. ತೀರ್ಥಹಳ್ಳಿಯಲ್ಲಿ ಬಾಲಕಿ ನಂದಿತಾ ಸಾವಿನ ಪ್ರಕರಣ ಮತ್ತು ಬೆಂಗಳೂರಿನಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಎಲ್ಲೆಡೆ ಬುಧವಾರ ಪ್ರತಿಭಟನೆ ವ್ಯಾಪಕವಾಗಿತ್ತು.
ರಾಜಧಾನಿಯಲ್ಲಿ
ಅತ್ಯಾಚಾರ ನಿಗ್ರಹ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ರಾಜ್ಯ ಸರ್ಕಾರ ಎಡವಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಮುಖಂಡರು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ರಾಜ್ಯಾದ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು. ಬಿಜೆಪಿ ರಾಜ್ಯ ಕಚೇರಿಯಿಂದ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಮುಖಂಡರು ಹಾಗೂ ಕಾರ್ಯಕರ್ತರು ಧಾವಿಸಿದ್ದರು.
ಆದರೆ ಶೇಷಾದ್ರಿಪುರಂ ನೆಹರು ವೃತ್ತದ ಬಳಿ ಎಲ್ಲರನ್ನೂ ತಡೆದ ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಮಹಿಳಾ ಕಾರ್ಯಕರ್ತರ ನಡುವೆ ಬಿಗಿ ವಾತಾವರಣ ಏರ್ಪಟ್ಟಿತು. ಮಹಿಳಾ ಕಾರ್ಯಕರ್ತರು ರಸ್ತೆಯ ಮೇಲೆ ಹೊರಳಾಡಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರು ಶೋಭಾ ಕರಂದ್ಲಾಜೆ ಜತೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂತು. ಗೃಹ ಸಚಿವರು, ಪೊಲೀಸರ ವಿರುದ್ಧ ಶೋಭಾ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಶೋಭಾ ಕ್ಷಮೆ ಕೋರಿದರು.
ಸಿಐಡಿ ತನಿಖೆ
ನಂದಿತಾ ಸಾವಿನ ಪ್ರಕರಣದ ತನಿಖೆ ನಡೆಸಲು ಬುಧವಾರ ಸಿಐಡಿ ಅಧಿಕಾರಿಗಳು ತೀರ್ಥಹಳ್ಳಿಗೆ ಅಗಮಿಸಿ ತನಿಖೆ ಕೈಗೊಂಡಿದ್ದಾರೆ. ಸಿಐಡಿ ಎಸ್.ಪಿ ರಾಜಪ್ಪ ನೇತೃತ್ವದ ತಂಡ ಘಟನೆ ನಡೆದ ಸ್ಥಳ, ಆಕೆ ಮನೆ ಸೇರಿದಂತೆ ಹಲವು ಕಡೆಗಳಿಗೆ ತೆರಳಿ ಮಾಹಿತಿ ಕಲೆ ಹಾಕಿತು. ಸಿಐಡಿ ಐಜಿ ಪ್ರಣಬ್ ಕುಮಾರ್ ಮೊಹಂತಿ ತೀರ್ಥಹಳ್ಳಿಗೆ ಭೇಟಿ ನೀಡಿದ್ದಾರೆ. ಪ್ರಕರಣ ನಡೆದಿದೆ ಎನ್ನಲಾದ ಅನಂದಗಿರಿ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಎಲ್ಲೆಡೆ ಪ್ರತಿಭಟನೆ
ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ, ಬೆಳಗಾವಿ, ಹಾಸನ, ಹಾವೇರಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಹಲವು ಸಂಘಟನೆಗಳ ಕಾರ್ಯಕರ್ತರು ಹಾಗೂ ಜನತೆ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಹಜ ಸ್ಥಿಗೆ
ಅನುಮಾನಾಸ್ಪದ ಸಾವಿನ ನಂತರ 6ನೇ ದಿನವಾದ ಬುಧವಾರ ತೀರ್ಥಹಳ್ಳಿ ಪಟ್ಟಣ ಹಾಗೂ ಹೊರವಲಯದಲ್ಲಿ ಸಹಜ ಸ್ಥಿತಿ ಕಂಡುಬಂದಿದೆ. ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ತೆರೆದುಕೊಂಡಿದ್ದು, ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಬ್ಯಾಂಕು, ಸರ್ಕಾರಿ ಕಚೇರಿಗಳು ಕೆಲಸದಲ್ಲಿ ನಿರತವಾಗಿದ್ದವು. ಪೊಲೀಸ್ ಬಂದೋ ಬಸ್ತ್ ಮುಂದುವರೆಸಲಾಗಿದೆ.
ಟಿಆರ್‌ಪಿಗಾಗಿ ವೈಭವೀಕರಣ
ಮಾಧ್ಯಮದವರು ಅತ್ಯಾಚಾರ ಪ್ರಕರಣಗಳ ಸುದ್ದಿಯನ್ನು ವೈಭವೀಕರಿಸುತ್ತಿವೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಆರೋಪಿಸಿದ್ದಾರೆ. ದಿಗ್ವಿಜಯ್ ಭೇಟಿ ಬಳಿಕ ಸುದ್ದಿಗಾರರು ಪ್ರಶ್ನಿಸಿದಾಗ ಕೋಪಗೊಂಡು, ನೀವು ಒಳ್ಳೆಯ ಸುದ್ದಿ ಪ್ರಸಾರ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಅತ್ಯಾಚಾರ ಪ್ರಕರಣವನ್ನು ಮಾಧ್ಯಮಗಳು ಟಿಆರ್‌ಪಿಗಾಗಿ ವೈಭವೀಕರಿಸುತ್ತಿವೆ ಎಂದು ಸಾರಾಸಗಟು ಆರೋಪಿಸಿದ್ದೀರಲ್ಲಾ ಜಾರ್ಜ್, ಹಾಗಾದರೆ ನೀವು ಮುಖ್ಯಮಂತ್ರಿಯಾಗಿರುವುದು ಲಂಚ ತಿನ್ನಲು ಅಥವಾ ಹಣ ಸಂಪಾದಿಸಲು ಎಂದು ಜನ ಹೇಳಿದರಕೆ ಒಪ್ಪುತ್ತೀರಾ?
-ಟ್ವೀಟ್‌ನಲ್ಲಿ ಸುಧಾಕರ್