ಬೆಂಗಳೂರು: ಸಮಾಜದಲ್ಲಿರುವ ಅನಿಷ್ಟ ಪದ್ಧತಿ, ಮೂಢನಂಬಿಕೆಗಳನ್ನು ತೊಡೆದುಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು.
ರಾಜ್ಯದ ಮಹಿಳೆಯರು, ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಮುಂಬರುವ ಚಳಿಗಾಲದ ಅಧಿವೇಶನದಲ್ಲೇ ಈ ಸಮಸ್ಯೆಗಳನ್ನು ಬಗೆಹರಿಬೇಕು ಎಂದು ಆಗ್ರಹಿಸಿ ರಾಜ್ಯದ ನೂರಾರು ಮಠಾಧೀಶರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
13 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಪ್ರಮುಖ ಸ್ವಾಮೀಜಿಗಳು ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಈ ಉಪವಾಸ ಸತ್ಯಾಗ್ರಹದ ನೇತೃತ್ವವನ್ನು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಹಿಸಿದ್ದಾರೆ. ಅಲ್ಲದೆ ಈ ಪ್ರತಿಭಟನೆಗೆ ಬರಹಗಾರರು, ಸಾಹಿತಿಗಳು, ಚಿಂತಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಮೂಢನಂಬಿಕೆಗೆ ಸಂಬಂಧಿಸಿ ಈಗಾಗಲೇ ಸರ್ಕಾರದ ಮುಂದೆ ಎರಡು ಕರಡು ಮಸೂದೆಗಳಿವೆ. ಅವನ್ನು ಪರಿಷ್ಕರಿಸಿ ಶಿಫಾರಸು ಮಾಡಲು ಸದನ ಸಮಿತಿ ರಚಿಸಬೇಕು. ಈ ಸಂಬಂಧ ನಾಡಿನ ಪ್ರಮುಖರನ್ನು ಕರೆದು ಅಭಿಪ್ರಾಯ ಸಂಗ್ರಹಿಸಬೇಕು. ಮಡೆಸ್ನಾನ, ಪಂಕ್ತಿಭೇದ ನಿಷೇಧವಾಗಬೇಕು, ಅತ್ಯಂತ ಹಿಂದುಳಿದ ಮಲೆಕುಡಿಯರ ಏಳಿಗೆಗೆ ಸರ್ಕಾರ ವಿಶೇಷ ಆರ್ಥಿಕ ಯೋಜನೆ ರೂಪಿಸಬೇಕು, ಪೌರಕಾರ್ಮಿಕರನ್ನು 'ಡಿ' ದರ್ಜೆಗೇರಿಸಬೇಕು, ದೇವದಾಸಿ ಪದ್ದತಿ ಸೇರಿದಂತೆ ಇನ್ನೂ ಜೀವಂತವಾಗಿರುವ ಕೆಲ ಅನಿಷ್ಟ ಪದ್ಥತಿ ನಿರ್ಮೂಲನೆಗೆ ಮುಂದಾಗಬೇಕು.
ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಕರ್ನಾಟಕ ಅಲೆಮಾರಿ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂಬುದು ಸೇರಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇದೇ ನವೆಂಬರ್ 25, 29 ಹಾಗೂ 30ರಂದು ಮಡೆಸ್ನಾನ, ಎಡೆಸ್ನಾನ ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅನಿಷ್ಟ ಕಂದಾಚಾರಗಳನ್ನು ನಿಷೇಧಿಸುವಂತೆ ಸರ್ಕಾರದ ಗಮನ ಸೆಳೆಯಲು ಈ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ತಿಳಿಸಿದರು.