ಬೆಂಗಳೂರು: ಮಂಡೂರಿಗೆ ಕಸ ಹಾಕುವುದನ್ನು ಶುಕ್ರವಾರ ನಿಲ್ಲಿಸಿದ್ದು, ಪರ್ಯಾಯ ಘಟಕಗಳಿಗೆ ಕಸ ಲಾರಿಗಳನ್ನು ಕಳುಹಿಸಲಾಗುತ್ತಿದೆ.
ಡಿ.1 ರಿಂದ ಕಸ ಹಾಕುವುದನ್ನು ನಿಲ್ಲಿಸುತ್ತೇವೆ ಎಂದು ಮಾತು ಕೊಟ್ಟಂತೆ
ಬಿಬಿಎಂಪಿ ನಡೆದುಕೊಂಡಿದೆ. ಕಳೆದ ರಾತ್ರಿ 60-70 ಲಾರಿಗಳು ಮಂಡೂರಿಗೆ ತೆರಳಿದ್ದು, ಮಾರನೇ ದಿನದಿಂದ ಲಾರಿಗಳನ್ನು ಕಳುಹಿಸಬಾರದು ಎಂದು ಸೂಚಿಸಲಾಗಿದೆ. ಮಾವಳ್ಳಿಪುರ ಘಟಕ ಸೇರಿದಂತೆ ಹಲವು ಪರ್ಯಾಯ ಘಟಕಗಳಿಗೆ ಲಾರಿಗಳನ್ನು ಕಳುಹಿಸಲಾಗುತ್ತದೆ. ಗ್ರಾಮಸ್ಥರ ಜೊತೆಗೆ ಒಪ್ಪಂದ ಮಾಡಿಕೊಂಡ ದಿನಕ್ಕಿಂತ ಒಂದು ವಾರಕ್ಕೆ ಮುನ್ನವೇ ಕಸ ಹಾಕುವುದನ್ನು ನಿಲ್ಲಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಡೂರಿಗೆ ಪ್ರತಿ ದಿನ 300ಕ್ಕೂ ಹೆಚ್ಚು ಕಸದ ಲಾರಿಗಳು ತೆರಳುತ್ತಿದ್ದು , ಒಪ್ಪಂದದಂತೆ ಹಂತ ಹಂತವಾಗಿ ಲಾರಿಗಳ ಸಂಖ್ಯೆ ಕಡಿತಗೊಳಿಸಲಾಗಿತ್ತು. ಕೊನೆಯ ದಿನಗಳಲ್ಲಿ 60 ರಿಂದ 70 ಲಾರಿಗಳಲ್ಲಿ 500ರಿಂದ 600 ಟನ್ ಮಾತ್ರ ಮಂಡೂರಿಗೆ ಕಸ ಕಳುಹಿಸಲಾಗುತ್ತಿತ್ತು.
ಮೂರು ತಿಂಗಳೊಳಗೆ 6 ಹೊಸ ಘಟಕಗಳು ಆರಂಭವಾಗಲಿದ್ದು, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆಯಾಗಲಿದೆ. ಮುಂಡೂರಿನಲ್ಲಿ ಹಾಕಿರುವ ಕಸ ಸಂಸ್ಕರಿಸಲು ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ವಿಶೇಷ ಆಯುಕ್ತ ದರ್ಪಣ್ ಜೈನ್ ತಿಳಿಸಿದ್ದಾರೆ.