ಬೆಂಗಳೂರು: ಕಂಠೀರವ ಸ್ಡುಡಿಯೋದಲ್ಲಿ ನಿರ್ಮಿಸಲಾಗಿರುವ ವರನಟ ಡಾ. ರಾಜ್ ಕುಮಾರ್ ಅವರ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಉದ್ಘಾಟಿಸಿದರು.
ಕನ್ನಡ ಚಿತ್ರೋದ್ಯಮ ಮತ್ತು ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳ ಬಹುದಿನಗಳ ಕನಸಾಗಿದ್ದ ಡಾ.ರಾಜ್ ಕುಮಾರ್ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟನೆ ಮಾಡಿದ್ದಾರೆ. ಡಾ.ರಾಜ್ ಸಮಾಧಿಗೆ ಮೊದಲು ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ ಅವರು, ಬಳಿಕ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು. ಡಾ.ರಾಜ್ ಧೈವಾಧೀನರಾಗಿ 8 ವರ್ಷಗಳು ಕಳೆದ ಬಳಿಕ ರಾಜ್ಯ ಸರ್ಕಾರ ಡಾ.ರಾಜ್ ಸ್ಮಾರಕ ನಿರ್ಮಾಣಗೊಳಿಸಿದ್ದು, ಇಂದು ಭಾರತೀಯ ಚಿತ್ರರಂಗದ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಡಾ.ರಾಜ್ ಕುಟುಂಬದರಾದ ಪಾರ್ವತಮ್ಮ ರಾಜ್ ಕುಮಾರ್, ಮಕ್ಕಳಾದ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಇತರೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಇವರಲ್ಲದೆ ದಕ್ಷಿಣ ಭಾರತದ ಖ್ಯಾತ ನಟರಾದ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಮತ್ತು ಸಚಿವರಾದ ಅಂಬರೀಶ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇವರಲ್ಲದೆ ರಾಜ್ಯ ಸರ್ಕಾರದ ವತಿಯಿಂದ ಸಚಿವ ರೋಷನ್‌ಬೇಗ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಗೃಹ ಸಚಿವ ಕೆಜೆ ಜಾರ್ಜ್, ಸಚಿವೆ ಮತ್ತು ನಟಿ ಉಮಾಶ್ರೀ, ಮೇಯರ್ ಶಾಂತಕುಮಾರಿ ಸೇರಿದಂತೆ ಹಲವು ಸಚಿವ ಮತ್ತು ಶಾಸಕರಿದ್ದರು. ಇನ್ನು ಚಿತ್ರರಂಗದ ವತಿಯಿಂದ ನಟಿ ತಾರಾ, ನಿರ್ಮಾಪಕ ಮುನಿರತ್ನಂ ನಾಯ್ಡು, ನಟ ರವಿಂಚಂದ್ರನ್, ಹಿರಿಯ ನಟಿ ಬಿ.ಸರೋಜಾದೇವಿ, ನಟ ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಸಾರಾ ಗೋವಿಂದು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇನ್ನು ಕಠೀರವ ಸ್ಡುಡಿಯೋ ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ರಂಗಮಂದಿರದ ವಿಶೇಷ ವೇದಿಕೆಯಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಡಾ.ರಾಜ್ ಕುಮಾರ್ ಅವರ ಕುರಿತು ವಿವಿಧ ಗಣ್ಯರು ಮಾತನಾಡಲಿದ್ದಾರೆ.