ಬೆಂಗಳೂರು: ಪ್ರಗತಿ ಕಾಲೇಜಿನ ಅವ್ಯವಸ್ಥೆಗಳು ಹೊರಗೆ ಬರುತ್ತಿದ್ದು, ಕೇವಲ ಒಂದು ಕೋಣೆಯಲ್ಲಿ 8 ರಿಂದ 10 ಮಂದಿ ವಿದ್ಯಾರ್ಥಿನಿಯರು ವಾಸಿಸುತ್ತಿದ್ದ ಅಂಶ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿ ಗೌತಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷೆ ಮೊಟಮ್ಮ ಅವರು ಪ್ರಗತಿ ಕಾಲೇಜಿನ ಹಾಸ್ಟೆಲ್ ಗೆ ಭೇಟಿ ನೀಡಿದ್ದರು. ತಮ್ಮ ತಂಡದೊಂದಿಗೆ ಆಗಮಿಸಿದ್ದ ಮೋಟಮ್ಮ ಅವರು ಕಾಲೇಜಿನ ಹಾಸ್ಟೆಲ್ ಅವರಣವನ್ನು ಪರಿಶೀಲಿಸಿದರು. ಈ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಕೇವಲ 1 ಕೋಣೆಯಲ್ಲಿ 8 ರಿಂದ 10 ಮಂದಿ ವಿದ್ಯಾರ್ಥಿನಿಯರು ವಾಸಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ತಂಗಲು ಬೇಕಿದ್ದ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು ಎಂದು ಮೋಟಮ್ಮ ಹೇಳಿದ್ದಾರೆ.
ಹಂದಿ ಗೂಡಂತಿದ್ದ ಮಹೇಶ್ ಕೋಠಡಿ
ಇನ್ನು ಇದೇ ಹಾಸ್ಟೆಲ್ ನಲ್ಲಿಯೇ ವಾಸವಿದ್ದ ಆರೋಪಿ ಮಹೇಶ್ ಕೊಠಡಿಗೂ ಮೋಟಮ್ಮ ಅವರು ಭೇಟಿ ನೀಡಿದ್ದು, ಆರೋಪಿ ಮಹೇಶನ ಕೊಠಡಿ ತೀರಾ ಚಿಕ್ಕದಾಗಿತ್ತು ಎಂದು ಹೇಳಿದ್ದಾರೆ. "ಹಳ್ಳಿ ಭಾಷೆಯಲ್ಲಿ ಹೇಳುವುದಾದರೆ ಆತನ ಕೊಠಡಿ ಹಂದಿ ಗೂಡಿನಂತಿತ್ತು. ಬಹುಶಃ ಇದು ಕೂಡ ಆತನ ಮನಃಸ್ಥಿತಿ ವ್ಯಗ್ರಗೊಳ್ಳಲು ಕಾರಣವಾಗಿರಬಹುದು" ಎಂದು ಮೋಟಮ್ಮ ಅಭಿಪ್ರಾಯಪಟ್ಟಿದ್ದಾರೆ.
ಮಹತ್ವದ ದಾಖಲೆಗಳ ವಶ
ಗುರುವಾರ ಮಧ್ಯಾಹ್ನ ಪ್ರಗತಿ ಕಾಲೇಜಿಗೆ ಭೇಟಿ ನೀಡಿದ್ದ ಕಾಡುಗೋಡಿ ಪೊಲೀಸರು, ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿ ಕಾಲೇಜು ಬಳಿ ಪ್ರತಿಭಟನೆ
ಇದೇ ವೇಳೆ ವಿದ್ಯಾರ್ಥಿನಿ ಗೌತಮಿ ಕೊಲೆಗೆ ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಇಂದು ಮಧ್ಯಾಹ್ನ ಪ್ರಗತಿ ಕಾಲೇಜಿನ ಪ್ರತಿಭಟನೆ ನಡೆಸಿದ ಎಬಿವಿಪಿ ಸಂಘಟನೆ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಕಾಲೇಜಿನ ನಾಮಫಲಕವನ್ನು ಕಿತ್ತು ಬಿಸಾಡಿ ಅದಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.